ಉತ್ತರಕಾಶಿ(ಉತ್ತರಾಖಂಡ): ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರಗೆ ಕರೆತರಲಾಗಿದೆ. ಇದು ದೇಶದ ಸುದೀರ್ಘ ಮತ್ತು ವಿಶ್ವದ ನಾಲ್ಕನೇ ಅತಿ ಸುದೀರ್ಘ ರಕ್ಷಣಾ ಕಾರ್ಯಾಚರಣೆಯಾಗಿ ದಾಖಲೆ ನಿರ್ಮಿಸಿದೆ. ಹೌದು, ಏಳಕ್ಕಿಂತಲೂ ಹೆಚ್ಚು ದಿನಗಳ ವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಉದಾಹರಣೆಗಳು ಒಂದೆರಡು ಮಾತ್ರ ಇವೆ.
69 ದಿನಗಳ ಬಳಿಕ ಚಿಲಿಯ ಗಣಿ ಕಾರ್ಮಿಕರ ರಕ್ಷಣೆ: ಆಗಸ್ಟ್ 5, 2010 ರಂದು ಚಿಲಿಯ ತಾಮ್ರದ ಗಣಿ ಕುಸಿದ ಪರಿಣಾಮ 2,300 ಅಡಿ ಆಳದಲ್ಲಿ ಸಿಲುಕಿದ್ದ 33 ಗಣಿ ಕಾರ್ಮಿಕರನ್ನು 69 ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರಗೆ ಕರೆತರಲಾಗಿತ್ತು. 18 ದಿನಗಳ ಕಾಲ ಗಣಿ ಕಾರ್ಮಿಕರು ತಮ್ಮ ಬಳಿ ಇದ್ದ ಆಹಾರವನ್ನು ಮಿತವಾಗಿ ಸೇವಿಸುತ್ತಾ ಜೀವ ಉಳಿಸಿಕೊಂಡಿದ್ದರು. 69 ದಿನಗಳ ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ಬಳಿಕ ಗಣಿ ಕಾರ್ಮಿಕರನ್ನು ಹೊರಗೆ ಕರೆತರಲಾಗಿತ್ತು. ಮತ್ತೊಂದೆಡೆ, ಉತ್ತರಕಾಶಿ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರಿಗೆ ಕೇವಲ ಹತ್ತು ದಿನಗಳಲ್ಲಿಯೇ ಪರ್ಯಾಯ ಪೈಪ್ ಮೂಲಕ ವಿಶೇಷ ಆಹಾರವನ್ನು ಒದಗಿಸಲಾಗಿತ್ತು ಎಂಬುದನ್ನು ಈ ನೆನೆಯ ಬಹುದು.
ಥಾಯ್ಲೆಂಡ್‌ನಲ್ಲಿ 18 ದಿನಗಳ ನಂತರ ಯುವ ಫುಟ್‌ಬಾಲ್ ಆಟಗಾರರು ಮತ್ತು ತರಬೇತುದಾರನ ರಕ್ಷಣೆ: 2018 ರಲ್ಲಿ ಹಠಾತ್ ಪ್ರವಾಹದಿಂದ ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ ಯುವ ಫುಟ್‌ಬಾಲ್ ಆಟಗಾರರು ಮತ್ತು ತರಬೇತುದಾರನ ರಕ್ಷಣಾ ಕಾರ್ಯಾಚರಣೆ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. 1 ರಿಂದ 16 ವರ್ಷ ವಯಸ್ಸಿನ 12 ಮಂದಿ ಬಾಲಕರ ತಂಡವು ಅವರ 25 ವರ್ಷ ವಯಸ್ಸಿನ ಫುಟ್‌ಬಾಲ್ ತರಬೇತುದಾರರೊಂದಿಗೆ ಗುಹೆಯಲ್ಲಿ ಸಿಕ್ಕಿಬಿದ್ದರು. ಆಹಾರವಿಲ್ಲದೇ, ಗುಹೆಯ ಗೋಡೆಗಳಿಂದ ಕೆಳಗೆ ಹರಿಯುವ ನೀರನ್ನು ಕುಡಿಯುವ ಮೂಲಕ ಅವರು ತಮ್ಮ ಜೀವ ಉಳಿಸಿಕೊಂಡಿದ್ದರು. ತರಬೇತುದಾರ ಎಕ್ಕಾಪೋಲ್ ಚಾಂಟಾವೊಂಗ್, ಬಾಲಕರಿಗೆ ಧ್ಯಾನ ತಂತ್ರಗಳನ್ನು ಹೇಳಿಕೊಟ್ಟು, ಮಾನಸಿಕವಾಗಿ ಮತ್ತು ದೈಹಿಕವಾಗಿ ಧೈರ್ಯ ತುಂಬಿದ್ದರು. 18 ದಿನಗಳ ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಎಲ್ಲಾ 12 ಮಂದಿ ಬಾಲಕರು ಮತ್ತು ತರಬೇತುದಾರನನ್ನು ಯಶಸ್ವಿಯಾಗಿ ಹೊರಗೆ ತರಲಾಗಿತ್ತು.
ಟ್ಯಾಸ್ಮೆನಿಯಾದಲ್ಲಿ ಚಿನ್ನದ ಗಣಿ ಕಾರ್ಮಿಕರ ರಕ್ಷಣೆ: ಏಪ್ರಿಲ್ 25, 2006 ರಂದು ಟ್ಯಾಸ್ಮೆನಿಯನ್ ಗಣಿಯಲ್ಲಿ ಸಿಲುಕಿದ್ದ ಇಬ್ಬರು ಗಣಿ ಕಾರ್ಮಿಕರನ್ನು ಎರಡು ವಾರಗಳ ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರಗೆ ಕರೆತರಲಾಗಿತ್ತು.
ಇದನ್ನೂ ಓದಿ: ಸಾವು ಗೆದ್ದ 41 ಕಾರ್ಮಿಕರು, 17 ದಿನಗಳ ನಂತರ ಸಿಲ್ಕ್ಯಾರಾ ಸುರಂಗದಿಂದ ಎಲ್ಲರೂ ಪಾರು; ಸಂಭ್ರಮ!