ನವದೆಹಲಿ: ಸಂಘಟಿತ ವಲಯದಲ್ಲಿ 15 ಸಾವಿರ ರೂ.ಗಿಂತ ಹೆಚ್ಚು ಮೂಲ ವೇತನ ಪಡೆಯುತ್ತಿರುವ ಹಾಗೂ 1995ರ ಕಾರ್ಮಿಕರ ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ಒಳಪಡದವರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಮುಂದಾಗಿದೆ.
ಪ್ರಸ್ತುತ ಸೇವೆಗೆ ಸೇರುವ ವೇಳೆ ತಿಂಗಳಿಗೆ 15,000 ರೂ. ಮೂಲ ವೇತನ (ಮೂಲ ವೇತನ ಮತ್ತು ತುಟ್ಟಿಭತ್ಯೆ) ಇರುವ ಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ EPS-95 ಯೋಜನೆಗೆ ಒಳಗೊಳ್ಳುತ್ತಾರೆ. ಇವರು ಶೇ. 8.33 ದರದಲ್ಲಿ ಕಡಿಮೆ ವಂತಿಗೆಯನ್ನು ಪಿಂಚಣಿ ನಿಧಿಗೆ ಪಾವತಿಸುತ್ತಿರುವ ಕಾರಣ ನಿವೃತ್ತಿಯ ನಂತರ ಕಡಿಮೆ ಪಿಂಚಣಿ ಪಡೆಯುತ್ತಾರೆ. ಇದಕ್ಕೆ 2014ರಲ್ಲಿ ತಿದ್ದುಪಡಿ ತಂದ ಪಿಎಫ್ ಸಂಘಟನೆಯು ಪಿಂಚಣಿ ಪಡೆಯುವುದಕ್ಕೆ 15 ಸಾವಿರ ರೂಪಾಯಿ ಮೂಲವೇತನದ ಮಿತಿಯನ್ನು ಹಾಕಿತು.
ಮೂಲಗಳ ಪ್ರಕಾರ, ಹೊಸ ಪಿಂಚಣಿ ಯೋಜನೆಗಳ ಕುರಿತು ಮಾರ್ಚ್ 11 ಮತ್ತು 12ರಂದು ಗುವಾಹಟಿಯಲ್ಲಿ ನಡೆಯುವ ಪಿಎಫ್ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ನವೆಂಬರ್ 2021 ರಲ್ಲಿ ಪಿಂಚಣಿ ಸಂಬಂಧಿತ ಸಮಸ್ಯೆಗಳ ಕುರಿತು CBT ಯಿಂದ ರಚಿಸಲಾದ ಉಪ ಸಮಿತಿಯು ತನ್ನ ವರದಿಯನ್ನು ಸಹ ಸಲ್ಲಿಸಲಿದೆ.
ಇನ್ನು ಕನಿಷ್ಠ ಮೂಲ ವೇತನವನ್ನು 15 ಸಾವಿರ ರೂಪಾಯಿಯ ಬದಲಿಗೆ 25 ಸಾವಿರ ರೂಪಾಯಿಗೆ ಏರಿಸಬೇಕು ಎಂಬ ಪ್ರಸ್ತಾವ ಕೂಡ ಇಪಿಎಫ್‌ಒ ಮುಂದೆ ಇದೆ. ಆದರೆ, ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಜಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಡಿಸೆಂಬರ್ 2016 ರಲ್ಲಿ ಲೋಕಸಭೆಯಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.