ಡೆಹ್ರಾಡೂನ್ (ಉತ್ತರಾಖಂಡ): ಹಿರಿಯ ಪರಿಸರವಾದಿ ಮತ್ತು ಚಿಪ್ಕೊ ಚಳುವಳಿಯ ನಾಯಕ ಸುಂದರ್ಲಾಲ್ ಬಹುಗುಣ (94) ಅವರು ಕೋವಿಡ್ ಸೋಂಕಿಗೆ ಒಳಗಾಗಿ ವಿಧಿವಶರಾಗಿದ್ದಾರೆ.
ಸೋಂಕು ದೃಢಪಟ್ಟ ಬಳಿಕ ಮೇ 8 ರಂದು ಬಹುಗುಣ ಅವರನ್ನು ಉತ್ತರಾಖಂಡದ ರಿಷಿಕೇಶ್ನಲ್ಲಿರುವ ಏಮ್ಸ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 12 ರಂದು ಶ್ವಾಸಕೋಶದಲ್ಲಿ ಸೋಂಕು ಇರುವುದು ತಿಳಿದುಬಂದಿದ್ದು, ವೆಂಟಿಲೇಟರ್ ಬೆಂಬಲದಲ್ಲಿ ಅವರನ್ನು ಇರಿಸಲಾಗಿತ್ತು. ಮಧುಮೇಹ ಹಾಗೂ ನ್ಯುಮೋನಿಯಾದಿಂದಲೂ ಬಳಲುತ್ತಿದ್ದ ಅವರ ಆಮ್ಲಜನಕ ಮಟ್ಟ ಕುಸಿಯುತ್ತಾ ಬಂದಿದ್ದು, ಪರಿಸ್ಥಿತಿ ಗಂಭೀರವಾಗಿ ಇಂದು ಕೊನೆಯುಸಿರೆಳೆದಿದ್ದಾರೆ.
1973ರಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆದ ಚಿಪ್ಕೋ ಚಳವಳಿಯನ್ನು ಸುಂದರ್ಲಾಲ್ ಬಹುಗುಣ ಅವರು ಮುನ್ನಡೆಸಿದ್ದರು. ತೆಹ್ರಿ ಅಣೆಕಟ್ಟು ವಿರುದ್ಧದ ಚಳವಳಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಪರಿಸರದ ಪರವಾದ ಇವರ ಸೇವೆಗಳಿಗೆ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.