ಕೋಲ್ಕತಾ: ಕೊವಾಕ್ಸಿನ್ ಪರಿಣಾಮಕಾರಿತ್ವದ ಬಗ್ಗೆ ಗೊಂದಲದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಕೋವಾಕ್ಸಿನ್‌ಗೆ ಜಾಗತಿಕ ಒಪ್ಪಿಗೆ ಕೊಡಿಸುವ ಪ್ರಯತ್ನ ಮಾಡಬೇಕೆಂದು ಕೋರಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತಯಾರಿಸುವ ಕೋವಾಕ್ಸಿನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇನ್ನೂ ಗುರುತಿಸದ ಕಾರಣ, ಆ ಲಸಿಕೆ ಹಾಕಿಸಿಕೊಂಡವರನ್ನು ಹಲವಾರು ವಿದೇಶಗಳು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಪರಿಗಣಿಸಿಲ್ಲ. ಈ ಸಮಸ್ಯೆಯನ್ನು ಅನೇಕ ಜನರು, ವಿಶೇಷವಾಗಿ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಧಾನ ಮಂತ್ರಿ ತಕ್ಷಣವೇ ಕೊವಾಕ್ಸಿನ್‌ನ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪ್ರಾರಂಭಿಸಬೇಕು ಎಂದು ಮಮತಾ ತನ್ನ ಪತ್ರದಲ್ಲಿ ಬರೆದಿದ್ದಾರೆ.
ಇದನ್ನು ಓದಿ: ತಾರಕಕ್ಕೇರಿದ ಶಾಲಾ ಫೀಸ್ ಫೈಟ್: 10ನೇ ತರಗತಿ ಪರೀಕ್ಷೆಗೆ Delta+ ವೈರಸ್ Tension
ಭಾರತದಲ್ಲಿ, ಕೋವಿಡ್ -19 ವಿರುದ್ಧ ಪ್ರಸ್ತುತ ಬಳಸುತ್ತಿರುವ ಮೂರು ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ವಿದೇಶಕ್ಕೆ ಹೋಗುವವರಿಗೆ ಲಸಿಕೆ ಕಡ್ಡಾಯವಾಗಿದೆ. ಆದರೆ ಕೋವಾಕ್ಸಿನ್ ಲಸಿಕೆ ಹಾಕಿದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಈ ವಿಷಯದ ಬಗ್ಗೆ ಧ್ವನಿ ಎತ್ತಿದರು. "ಕೊವಾಕ್ಸಿನ್ ಬಗ್ಗೆ ಬಾಂಗ್ಲಾದೇಶ ಮತ್ತು ಬ್ರೆಜಿಲ್ನಲ್ಲೂ ಗೊಂದಲವಿದೆ. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು”ಎಂದು ಹೇಳಿದರು.