ಶೋಪಿಯಾನ್ (ಜಮ್ಮು-ಕಾಶ್ಮೀರ): ಉಗ್ರ ನಿಗ್ರಹದ ಕಾರ್ಯಾಚರಣೆ ಭಾಗವಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಬಾಸ್ಕುಚಾನ್ ಇಮಾಮಸಾಹಿಬ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಇದೇ ವೇಳೆ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಯಲ್ಲಿ ಓರ್ವ ಪೊಲೀಸ್ ಹುತಾತ್ಮರಾಗಿದ್ದು, ಸಿಆರ್‌ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಶ್ರೀನಗರ-ಶೋಪಿಯಾನ್ ಹೆದ್ದಾರಿ ಬಳಿಯ ಪುಲ್ವಾಮಾದ ಪಿಂಗ್ಲೆನ್ ಗ್ರಾಮದಲ್ಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರ ಪರಿಣಾಮ ಪೊಲೀಸ್ ಸಿಬ್ಬಂದಿಯಾದ ಜಾವೈದ್ ಅಹ್ಮದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಸಿಆರ್‌ಪಿಎಫ್ ಯೋಧರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯ ಬಳಿಕ ಉಗ್ರರು ಪರಾರಿಯಾಗಿದ್ದು, ದಾಳಿಕೋರರನ್ನು ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇತ್ತ, ಶೋಪಿಯಾನ್ ಜಿಲ್ಲೆಯ ಬಾಸ್ಕುಚಾನ್ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತನನ್ನು ಸ್ಥಳೀಯ ಉಗ್ರ ನಾಸೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಅದೇ ಪ್ರದೇಶದಲ್ಲಿ ಕಳೆದ ತಿಂಗಳು ಸೆಪ್ಟೆಂಬರ್ 6ರಂದು ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಈ ಉಗ್ರ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವರ್ಷ 155 ಉಗ್ರರ ಹತ್ಯೆ: ಕಾಶ್ಮೀರದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಈ ವರ್ಷದ ಸೆಪ್ಟೆಂಬರ್‌ವರೆಗೆ 155 ಉಗ್ರರನ್ನು ಸದೆಬಡಿಯಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ನಡೆದ ಹತ್ತು ಎನ್‌ಕಂಟರ್‌ಗಳಲ್ಲಿ 14 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ವಲಯದ ಹೆಚ್ಚುವರಿ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಓದಿ: 600 ಕೆಜಿ ಸ್ಫೋಟಕ ಬಳಸಿ ಪುಣೆಯ ಚಾಂದಿನಿ ಚೌಕ್ ಹಳೆಯ ಸೇತುವೆ ನೆಲಸಮ