ಪಲಾಮು (ಜಾರ್ಖಂಡ್): ಪಲಾಮು ಮತ್ತು ಚತ್ರಾ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ(ನಕ್ಸಲರು) ನಡುವೆ ಭೀಕರ ಗುಂಡಿನ ಚಕಮಕಿ ನಡೆಯುತ್ತಿದ್ದು, ಐವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಲಾಮು ಮತ್ತು ಚತ್ರಾ ಗಡಿಯಲ್ಲಿ ಮಾವೋವಾದಿಗಳ ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕೆಲವು ದಿನಗಳಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ, ಐಆರ್‌ಬಿ ಹಾಗೂ ಪಲಾಮು ಮತ್ತು ಚತ್ರಾದ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇಂದು ಬೆಳಗ್ಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಎರಡು ಜಿಲ್ಲೆಗಳ ಗಡಿ ಭಾಗದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದಿದೆ.
ಎನ್‌ಕೌಂಟರ್‌ನಲ್ಲಿ ಸದ್ಯದ ಮಾಹಿತಿಯಂತೆ 5 ಮಂದಿ ಮಾವೋವಾದಿಗಳು ಗುಂಡೇಟಿಗೆ ಬಲಿಯಾಗಿದ್ದಾರೆ. ಈಗಾಗಲೇ ಮೂವರು ನಕ್ಸಲೀಯರು ಹತರಾಗಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.
ನಕ್ಸಲೀಯ ನಾಯಕರ ಹತ್ಯೆ: ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಎನ್‌ಕೌಂಟರ್‌ನಲ್ಲಿ 25, 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದ್ದ ನಕ್ಸಲೀಯ ನಾಯಕರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಗೌತಮ್ ಪಾಸ್ವಾನ್ ನಕ್ಸಲರ ಕೇಂದ್ರ ಸಮಿತಿ ಸದಸ್ಯನಾಗಿದ್ದ. ಈತನ ತಲೆಗೆ 25 ಲಕ್ಷ ರೂ. ಕಟ್ಟಲಾಗಿತ್ತು. ಇದಲ್ಲದೇ, ರಾಜ್ಯ ಸಮಿತಿ ಸದಸ್ಯ ಅಜಿತ್ ಅಲಿಯಾಸ್ ಚಾರ್ಲಿಸ್ ತಲೆಗೆ 25 ಲಕ್ಷ, ವಲಯ ಕಮಾಂಡರ್ ಆಗಿದ್ದ ಅಮರ್ ಗಂಜು, ಸಂಜಯ್ ಭೂಯಾನ್ ಮತ್ತು ನಂದು ಎಂಬಾತನ ತಲೆಗೆ 10 ಲಕ್ಷ ರೂ. ಘೋಷಿಸಲಾಗಿತ್ತು. ಇವರೆಲ್ಲರನ್ನೂ ಭದ್ರತಾ ಪಡೆಗಳು ನುಗ್ಗಿ ಎನ್‌ಕೌಂಟರ್ ಮಾಡಿವೆ ಎಂದು ಮಾಹಿತಿ ಸಿಕ್ಕಿದೆ. ಸ್ಥಳದಿಂದ ಮೂರು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಅಪಾರ ಪ್ರಮಾಣದ ನಕ್ಸಲೀಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚತ್ರಾದ ಲವಲೋಂಗ್ ಮತ್ತು ಪಲಾಮುವಿನ ಪಂಕಿಯ ದ್ವಾರಕಾ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಪಲಾಮು, ಚತ್ರಾ ಮತ್ತು ಲತೇಹರ್ ಜಿಲ್ಲೆಯ ಪೊಲೀಸರು ಏಕಕಾಲದಲ್ಲಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಆರಂಭಿಸಿದಾಗ ಮಾಹಿತಿ ಅರಿತ ನಕ್ಸಲರು ಭದ್ರತಾ ಪಡೆಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರದೇಶವನ್ನು ಸೀಲ್ ಮಾಡಿದಾಗ, ತಪ್ಪಿಸಿಕೊಳ್ಳುವ ವೇಳೆ ನಕ್ಸಲರು ಗುಂಡೇಟಿಗೆ ಬಲಿಯಾಗಿದ್ದಾರೆ.
ನಕ್ಸಲರ ಅಡಗುತಾಣವಾಗಿದ್ದ ಪ್ರದೇಶ: ಈ ಪ್ರದೇಶವನ್ನು ನಕ್ಸಲೀಯರ ದೊಡ್ಡ ಗುಂಪು ಅಡಗುತಾಣವನ್ನಾಗಿ ಮಾಡಿಕೊಂಡಿದೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಸುಳಿವಿನ ಆಧಾರದ ಮೇಲೆ ಕೋಬ್ರಾ 203, ಸಿಆರ್‌ಪಿಎಫ್, ಜಾಗ್ವಾರ್ ಮತ್ತು ಪಲಾಮು, ಚತ್ರಾ ಜಿಲ್ಲಾ ಪೊಲೀಸ್ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇನ್ನೂ ಅನೇಕ ನಕ್ಸಲೀಯರು ಗುಂಡೇಟಿಗೆ ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿದ್ದಾರೆ.
ಗಡಿಯಲ್ಲಿ ಆರಂಭವಾದ ಎನ್‌ಕೌಂಟರ್ ಸದ್ದು ಪಲಾಮುವಿನ ದ್ವಾರಕಾ ಪ್ರದೇಶವನ್ನೂ ತಲುಪಿದೆ. ಸಿಆರ್‌ಪಿಎಫ್ ಮತ್ತು ಪಲಾಮು ಜಿಲ್ಲಾ ಪಡೆಗಳು ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದಿವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಉನ್ನತಾಧಿಕಾರಿಗಳು ಮತ್ತು ಸಿಆರ್‌ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯಾವಳಿ ವೇಳೆ ತಪ್ಪು ತೀರ್ಪು ಕೊಟ್ಟರೆಂದು ಅಂಪೈರ್ ಹತ್ಯೆಗೈದ ಯುವಕ!