ನಾಗ್ಪುರ (ಮಹಾರಾಷ್ಟ್ರ): ಬೆಂಗಳೂರಿನಿಂದ ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ಗೋ ಏರ್ ವಿಮಾನವು ಶನಿವಾರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬಾಬಾ ಸಾಹೇಬ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ ಒಟ್ಟು 139 ಮಂದಿ ಪ್ರಯಾಣಿಕರಿದ್ದು, ಎಲ್ಲಾ ಪ್ರಯಾಣಿಕರು, ಸಿಬ್ಬಂದಿ ಮತ್ತು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಬೇರೆ ವಿಮಾನದ ಮೂಲಕ ಎಲ್ಲಾ ಪ್ರಯಾಣಿಕರನ್ನು ಪಾಟ್ನಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೋ ಏರ್ ಫ್ಲೈಟ್ (ಜಿ8873) ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಪಾಟ್ನಾಗೆ ಹೊರಟಿತ್ತು. ಆದರೆ, ವಿಮಾನದಲ್ಲಿ ತಾಂತ್ರಿಕ ದೋಷವಿರುವುದನ್ನು ಮನಗಂಡ ಪೈಲಟ್ ನಾಗ್ಪುರ ವಿಮಾನ ನಿಲ್ದಾಣದ ಎಟಿಎಸ್ ಅನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೇಳಿದ್ದಾರೆ. ವಿಮಾನದ ತಾಂತ್ರಿಕ ದೋಷವನ್ನು ಪರಿಗಣಿಸಿ, ಪೈಲಟ್‌ಗೆ ತಕ್ಷಣ ಲ್ಯಾಂಡಿಂಗ್ಗೆ ಅನುಮತಿ ನೀಡಲಾಯಿತು.
ಕೂಡಲೇ ತುರ್ತು ಲ್ಯಾಂಡಿಂಗ್‌ಗಾಗಿ ರನ್‌ವೇಯನ್ನು ಖಾಲಿ ಮಾಡಲಾಗಿತ್ತು. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಗ್ನಿಶಾಮಕ ಇಂಜಿನ್‌ಗಳು ಮತ್ತು ಆ್ಯಂಬುಲೆನ್ಸ್‌ಗಳನ್ನು ಸಹ ಸಿದ್ಧಗೊಳಿಸಲಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮಳೆಯಾರ್ಭಟ: ರಾಜ್ಯಪಾಲರನ್ನು ಭೇಟಿಯಾಗಲಿರುವ ಸಿಎಂ ಸ್ಟಾಲಿನ್