ಫಿಲಿಬಿತ್: ಉತ್ತರ ಪ್ರದೇಶದ ಫಿಲಿಬಿತ್ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದರಲ್ಲಿ, ವಿವಾಹಕ್ಕೂ ಸ್ವಲ್ಪ ಹೊತ್ತಿಗೆ ಮುಂಚೆ ಮನೆಯಿಂದ ಕಾಣೆಯಾಗಿದ್ದ ವರನನ್ನು ಪೊಲೀಸರು ಮತ್ತೆ ಹುಡುಕಿ ತಂದಿರುವ ಘಟನೆ ನಡೆದಿದೆ. ಮನೆಯವರು ನಿಶ್ಚಯಿಸಿದ್ದ ಮದುವೆ ತನಗೆ ಒಪ್ಪಿಗೆಯಿಲ್ಲದ ಕಾರಣ ತಾನು ಮನೆಯಿಂದ ಓಡಿಹೋಗಿ ತನ್ನ ಪ್ರೇಯಸಿಯೊಂದಿಗೆ ಮದುವೆಯಾಗಿದ್ದೇನೆ ಎಂದು ಪೊಲೀಸರಿಗೆ ಆತ ತಿಳಿಸಿದ್ದಾನೆ.
ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಪೊಲೀಸರು ಯುವಕನನ್ನು ಆತನ ಪತ್ನಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬಿಲಸಂದಾ ಪೊಲೀಸ್ ಠಾಣೆಯ ಅಧಿಕಾರಿ ಅಚಲ್ ಕುಮಾರ್, ಮದುವೆಗೂ ಮುನ್ನ ಯುವಕನೊಬ್ಬ ಅಲ್ಲಿಂದ ಕಾಣೆಯಾಗಿದ್ದ. ಆತನನ್ನು ಹುಡುಕಿ ಕರೆತರಲಾಗಿದೆ. ಆತ ತನ್ನ ಪ್ರೇಯಸಿಯೊಂದಿಗೆ ಕಾನೂನು ಬದ್ಧವಾಗಿ (ಕೋರ್ಟ್ ಮ್ಯಾರೇಜ್) ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.
ಘಟನೆಯ ವಿವರ: ಪಿಲಿಭಿತ್‌ನ ಬಿಲಸಂದಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್‌ಪುರ ಗ್ರಾಮದ ನಿವಾಸಿ ಅವಧ್ ತಿವಾರಿ ಎಂಬುವರು ತಮ್ಮ ಹಿರಿಯ ಮಗ ಶಶಾಂಕ್‌ನ ಮದುವೆಯನ್ನು ಫತೇಗಂಜ್ ಪಶ್ಚಿಮ ಬರೇಲಿ ಜಿಲ್ಲೆಯ ವಧುವಿನೊಂದಿಗೆ ಮಾಡಲು ನಿಶ್ಚಯಿಸಿದ್ದರು. ಫೆಬ್ರವರಿ 1 ರಂದು ಶಶಾಂಕ್ ಕುಟುಂಬದ ಬಾರಾತ್ ಬರೇಲಿಗೆ ಹೊರಡಲು ಎಲ್ಲ ಸಿದ್ಧತೆಗಳಾಗಿದ್ದವು. ಬಾರಾತ್ನಲ್ಲಿ ತೆರಳಲು ಸಂಬಂಧಿಕರೂ ಸಿದ್ಧರಾಗಿದ್ದರು. ಅಷ್ಟರಲ್ಲಿ ಶಶಾಂಕ್ ಮನೆಯಿಂದ ಓಡಿ ಹೋಗಿರುವ ಸುದ್ದಿ ಕುಟುಂಬದವರಿಗೆ ತಿಳಿಯಿತು. ಸಾಕಷ್ಟು ಹುಡುಕಾಟ ನಡೆಸಿದರೂ ಶಶಾಂಕ್ ಸುಳಿವು ಸಿಗದಿದ್ದಾಗ ಕುಟುಂಬಸ್ಥರು ವರ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಶಾಂಕ್‌ಗಾಗಿ ಹುಡುಕಾಟ ಆರಂಭಿಸಿದ್ದರು.
ಇದನ್ನು ಓದಿ: ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ದಲಿತ ಕುಟುಂಬದ ಮದುವೆ: ಡ್ರೋನ್ ಕ್ಯಾಮೆರಾ ಮೂಲಕ ನಿಗಾ..!
ವರ ಓಡಿಹೋದ ನಂತರ ಏನು ಮಾಡಬೇಕೆಂದು ತೋಚದ ಆತನ ಮನೆಯವರು ವಧುವಿನ ಕಡೆಯವರೊಂದಿಗೆ ಚರ್ಚಿಸಿ ಶಶಾಂಕ್ ಈತನ ಕಿರಿಯ ಸಹೋದರನನ್ನೇ ಮದುಮಗನನ್ನಾಗಿ ಮಾಡಿ ಬಾರಾತ್ನೊಂದಿಗೆ ಬರೇಲಿ ತಲುಪಿದರು. ಮದುವೆಯ ಎಲ್ಲ ಸಂಪ್ರದಾಯಗಳು ಮುಗಿದು ಫೆ 2 ರಂದು ಅತ್ತಿಗೆ ಮನೆಗೆ ಬಂದರೂ ಶಶಾಂಕ್ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದರು. ಘಟನೆಯಿಂದ ಪೊಲೀಸರು ಕೂಡ ಚಿಂತಿತರಾಗಿದ್ದರು.
ಶಶಾಂಕ್ ಕೊನೆಗೆ ಬುಧವಾರ ಬಿಸಲ್‌ಪುರ ಪ್ರದೇಶದಲ್ಲಿ ಬಿಲಸಂದಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮನೆಯವರು ನಿಶ್ಚಯಿಸಿದ ಮದುವೆ ತನಗೆ ಒಪ್ಪಿಗೆ ಇಲ್ಲ ಎಂದು ಶಶಾಂಕ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಆತ ಇದಕ್ಕೂ ಮುನ್ನ ಬರೇಲಿಯ ಹುಡುಗಿಯೊಬ್ಬಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಮನೆಬಿಟ್ಟು ಹೋದ ಮೇಲೆ ಶಶಾಂಕ್ ಅದೇ ಹುಡುಗಿಯನ್ನು ಮದುವೆಯಾಗಿದ್ದ. ಪೊಲೀಸರು ತನ್ನ ಗಂಡನನ್ನು ಕರೆದುಕೊಂಡು ಹೋಗಿರುವ ವಿಷಯ ತಿಳಿದು ಆತನ ಪತ್ನಿ ಠಾಣೆಗೆ ಬಂದಿದ್ದಾಳೆ. ಕೋರ್ಟ್ ಮ್ಯಾರೇಜ್ ಸರ್ಟಿಫಿಕೇಟ್ ನೋಡಿದ ಪೊಲೀಸರು ಶಶಾಂಕ್ ನನ್ನು ಯುವತಿಯೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಲಬುರಗಿ: ವಿವಿಧ ಅಪರಾಧ ಪ್ರಕರಣದಲ್ಲಿ ಮೂವರ ಸಾವು; ಕೊಲೆ ಆರೋಪಿಗೆ ಜೀವವಾಧಿ ಶಿಕ್ಷೆ