ಪಾಟ್ನಾ: ಬಿಹಾರದ ಗಯಾ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ನಂತರ 11 ವಿದೇಶಿ ಪ್ರಜೆಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಎಲ್ಲರನ್ನೂ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ನಾಲ್ವರು ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಇಬ್ಬರು ಇಂಗ್ಲೆಂಡ್ ದೇಶದಿಂದ ಬಂದವರಿದ್ದಾರೆ.
ಬೌದ್ಧರ ತೀರ್ಥಯಾತ್ರೆಯ ಪ್ರಮುಖ ಕ್ಷೇತ್ರ ಬೋಧಗಯಾವು ಪ್ರತಿ ವರ್ಷ ಬೋಧ ಮಹೋತ್ಸವ ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಇವರು ಬಂದಿದ್ದರು. ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.
ಗಯಾ ಜಿಲ್ಲಾ ಉಸ್ತುವಾರಿ ವೈದ್ಯಾಧಿಕಾರಿ ಡಾ.ರಂಜನ್ ಸಿಂಗ್ ಅವರು ಹೇಳುವ ಪ್ರಕಾರ, ಇವರಿಗೆ ಬಾಧಿಸಿದ ಪ್ರಕರಣಗಳು ಗಂಭೀರವಾಗಿಲ್ಲ. ಅಧಿಕಾರಿಗಳು ರೋಗ ಹರಡುವುದನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ ಬಿಡುಗಡೆ!
ಬೋಧ ಮಹೋತ್ಸವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ವಿದೇಶಿಗರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಒಟ್ಟು 33 ವಿದೇಶಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಹನ್ನೊಂದು ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಡಾ.ಸಿಂಗ್ ತಿಳಿಸಿದರು.
ಶುಕ್ರವಾರ ಚೀನಾದಿಂದ ಹಿಂದಿರುಗಿದ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸೋಮವಾರ 196 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ 3,428 ಇದೆ. ಕೋವಿಡ್ ಸೋಂಕಿತರ ಸಂಖ್ಯೆ 4.46 ಕೋಟಿ (4,46,77,302) ಇದ್ದು, ಸಾವಿನ ಸಂಖ್ಯೆ 5,30,695 ರಷ್ಟಿದೆ.