ಹರಿದ್ವಾರ: ಉತ್ತರಾಖಂಡದ ಹರಿದ್ವಾರದ ಮದ್ಯದಂಗಡಿ ಬಳಿ ಬುಧವಾರ ರಾತ್ರಿ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ. ಮೂಲಗಳ ಪ್ರಕಾರ, ಆನೆಗಳು ಹರಿದ್ವಾರದ ಜಗದೀಶ್‌ಪುರ ಪ್ರದೇಶಕ್ಕೆ ನುಗ್ಗಿ ಲಕ್ಸಾರ್ ರಸ್ತೆಯಲ್ಲಿರುವ ಮದ್ಯದಂಗಡಿ ಬಳಿ ಅಡ್ಡಾಡುತ್ತಿದ್ದವು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಘಟನೆ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕಾಗಮಿಸಿ ಆನೆಗಳನ್ನು ಕಾಡಿನತ್ತ ಓಡಿಸಿದರು. ಈ ಬಗ್ಗೆ ಹರಿದ್ವಾರ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ನೌಟಿಯಾಲ್ ಮಾತನಾಡಿ, ಆನೆಗಳ ಓಡಾಟ ನಿರಂತರವಾಗಿ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂಡಗಳು ದಿನವಿಡೀ ಸನ್ನದ್ಧವಾಗಿದ್ದು, ನಗರ ಪ್ರದೇಶಗಳಿಗೆ ಆನೆಗಳು ಬರಲು ಕಾರಣ ಕಬ್ಬಿನ ಕೃಷಿ ಎಂದಿದ್ದಾರೆ.
ಹರಿದ್ವಾರದಲ್ಲಿ ಪ್ರಾಣಿಗಳ ಓಡಾಟ ಹೆಚ್ಚಳ.. ಕಳೆದ ಹಲವು ದಿನಗಳಿಂದ ಹರಿದ್ವಾರದಲ್ಲಿ ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಗಂಗಾನದಿ ದಡದಲ್ಲಿರುವ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕಂಖಾಲ್ ದಡದಲ್ಲಿರುವ ಬಿಹೆಚ್‌ಇಎಲ್‌ನಲ್ಲಿ ಆನೆಗಳು ಮತ್ತು ಚಿರತೆಗಳ ಸಂಚಾರದಿಂದಾಗಿ ಸ್ಥಳೀಯರಲ್ಲಿ ಸಂಚಲನ ಉಂಟಾಗಿದೆ. ಅಲ್ಲದೇ, ದಟ್ಟಣೆಯ ರಸ್ತೆಗಳಲ್ಲಿಯೂ ಆನೆಗಳು ಕಾಣಿಸಿಕೊಂಡಿವೆ.
ರಾಜಾಜಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್.. ಇದಕ್ಕೂ ಮುನ್ನ ಆನೆಯೊಂದು ಹರಿದ್ವಾರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ರ ರೈಲ್ವೆ ಹಳಿಯನ್ನು ಪ್ರವೇಶಿಸಿತ್ತು. ರೈಲ್ವೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಆನೆ ಅಡ್ಡಾಡುತ್ತಲೇ ಇತ್ತು. ಸಾಕಷ್ಟು ಪ್ರಯತ್ನದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಅರಣ್ಯಾಧಿಕಾರಿಗಳ ಪ್ರಕಾರ, ಆನೆಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹರಿದ್ವಾರ ಶ್ರೇಣಿಯಿಂದ ಮಾನಸಾ ದೇವಿ ಮಾರ್ಗವಾಗಿ ನಿಲ್ದಾಣವನ್ನು ಪ್ರವೇಶಿಸಿತ್ತು.
ಇಂತಹುದೇ ಘಟನೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿದ್ದವು. ಏಕಾಏಕಿ ಅನೇಕ ಆನೆಗಳು ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು.
ಆಹಾರ ಅರಸಿ ನಾಡಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು: ಕೆಲವು ದಿನಗಳಿಂದ ಸ್ಥಳೀಯ ಅರಣ್ಯ ಪ್ರದೇಶದಿಂದ ಆನೆಗಳು ಗ್ರಾಮಕ್ಕೆ ಬರುತ್ತಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಇದೀಗ ಕುರುಪಾಂ ಕ್ಷೇತ್ರದಲ್ಲಿ ಆನೆಗಳು ಅವಾಂತರವನ್ನು ಸೃಷ್ಟಿಸಿದ್ದವು. ಗರುಗಬಿಲ್ಲಿ ಮಂಡಲದ ಖಡ್ಗವಲಸ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡು ರೈಸ್ ಮಿಲ್ ಮೇಲೆ ದಾಳಿ ಮಾಡಿದ್ದವು. ಇಡೀ ಆವರಣವನ್ನು ಆನೆಗಳು ಧ್ವಂಸಗೊಳಿಸಿ ಸ್ಥಳೀಯರನ್ನು ಆತಂಕಕ್ಕೆ ದೂಡಿದ್ದವು.
ರೈಸ್ ಮಿಲ್ಗೆ ನುಗ್ಗಿ ಅಕ್ಕಿ ಸೇವಿಸಿದ್ದ ಆನೆಗಳು.. ಗೋದಾಮಿನ ಬಾಗಿಲು ಮುಚ್ಚಿದ್ದರಿಂದ ಹೊರಗೆ ಯಾವುದೇ ಧಾನ್ಯ ಸಿಕ್ಕಿರಲಿಲ್ಲ. ಜೊತೆಗೆ ಆನೆಗಳು ಸಹ ಹೆಚ್ಚಿನ ಹಾನಿಯನ್ನು ಮಾಡಿರಲಿಲ್ಲ. ಒಂದು ವಾರದ ಹಿಂದೆ ಕೂಡ ಮತ್ತೊಂದು ರೈಸ್ ಮಿಲ್ಗೆ ನುಗ್ಗಿದ್ದ ಆನೆಗಳು ಅಲ್ಲಿದ್ದ ಅಕ್ಕಿಯನ್ನು ತಿಂದು ಹೋಗಿದ್ದವು.