ಮಹಾರಾಜಗಂಜ್( ಉತ್ತರಪ್ರದೇಶ): ಪೂರ್ವಾಂಚಲ ವಿದ್ಯುತ್ ವಿತರಣಾ ನಿಗಮದ ಯಡವಟ್ಟು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರಿಗೆ ಕರೆಂಟ್ ಸಂಪರ್ಕವನ್ನೇ ನೀಡದೆ 36 ಸಾವಿರ ರೂಪಾಯಿ ವಿದ್ಯುತ್ ಬಿಲ್ ಕಳುಹಿಸಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಮಹಾರಾಜಗಂಜ್‌ನ ಘುಘ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭುವನಿ ಗ್ರಾಮದ ಚುವಾನಿ ಟೋಲಾ ನಿವಾಸಿ ವಿಶೇಷ ಚೇತನ ಅರ್ಜುನ್ ಪ್ರಸಾದ್ಗೆ ಪೂರ್ವಾಂಚಲ ವಿದ್ಯುತ್ ವಿತರಣಾ ನಿಗಮವು ಕರೆಂಟ್ ಸಂಪರ್ಕ ನೀಡದೆಯೇ 36 ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಕಳುಹಿಸಿದ್ದಾರೆ. ಇದನ್ನು ನೋಡಿದ ವಿಕಲಚೇತನ ವ್ಯಕ್ತಿಗೆ ಆಶ್ಚರ್ಯದ ಜೊತೆ ಆಘಾತವೂ ಆಗಿದೆ.
ಓದಿ: India Corona: ದೇಶದಲ್ಲಿ ಹೊಸದಾಗಿ 2.38 ಲಕ್ಷ ಮಂದಿಗೆ ಕೋವಿಡ್.. ನಿಟ್ಟುಸಿರಿನತ್ತ ಭಾರತ!
2012ರಲ್ಲಿ ತಮ್ಮ ಗ್ರಾಮವನ್ನು ರಾಮ್ ಮನೋಹರ್ ಲೋಹಿಯಾ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಅರ್ಜುನ್ ಪ್ರಸಾದ್ ಹೇಳಿದ್ದಾರೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಲಾಗಿತ್ತು. ಆ ಸಮಯದಲ್ಲಿ ಅವರ ಜಾಗದಲ್ಲಿ ಶೌಚಾಲಯ ನಿರ್ಮಾಣವನ್ನು ಜವಾಬ್ದಾರಿಯುತ ಅಧಿಕಾರಿಗಳೇ ಮಾಡಿದ್ದಾರೆ. ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಗ್ರಾಮದ ಎಲ್ಲ ಮನೆಗಳಿಗೂ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿತ್ತು.
ಈ ನಡುವೆ ವಿದ್ಯುತ್ ಕಂಬಕ್ಕೆ ಸಂಪರ್ಕ ನೀಡದೆಯೇ ಅರ್ಜುನ್ ಮನೆಯ ಶೌಚಾಲಯಕ್ಕೆ ಮೀಟರ್ ವಯರ್ ಹಾಕಲಾಗಿತ್ತು. ಮೀಟರ್ ಅಳವಡಿಕೆಯಾದ ನಂತರ ಇಂದಿನವರೆಗೂ ಅದರಲ್ಲಿ ವಿದ್ಯುತ್ ಪೂರೈಕೆಯಾಗಲಿ ಮತ್ತು ಮೀಟರ್ ಓದುವುದಾಗಲಿ ಮಾಡಿಲ್ಲ.
ಇದಾದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಮನೆಗೆ ಬಂದು ಮನಸೋ ಇಚ್ಛೆ ಮೀಟರ್ ಓದಿ ವಿದ್ಯುತ್ ಬಿಲ್ ಕಳುಹಿಸಲು ಆರಂಭಿಸಿದರು. ವಿದ್ಯುತ್ ಬಿಲ್ ಬಂದಾಗ ನಾನು ಕುಸಿದು ಬಿದ್ದೆ ಎಂದು ಅರ್ಜುನ್ ಪ್ರಸಾದ್ ಹೇಳಿಕೊಂಡಿದ್ದಾರೆ.
ವಿದ್ಯುತ್ ಮೀಟರ್ ಅಳವಡಿಸಿದ ನಂತರ ಸಂಪರ್ಕಕ್ಕಾಗಿ ಅಧಿಕಾರಿಗಳಿಗೆ ಪದೇ ಪದೆ ಮನವಿ ಮಾಡಿದರೂ ಇಲ್ಲಿಯವರೆಗೆ ವಿದ್ಯುತ್ ಕಂಬದಿಂದ ಮೀಟರ್‌ನಲ್ಲಿ ಸಂಪರ್ಕ ನೀಡಿಲ್ಲ. ಆದರೆ ಪ್ರತಿ ತಿಂಗಳು ಅವರಿಗೆ ವಿದ್ಯುತ್ ಬಿಲ್ ಕಳುಹಿಸಲಾಗುತ್ತಿತ್ತು. ಇದರಿಂದ ನಾನು ಕುಗ್ಗುತ್ತಲೇ ಹೋದೆ ಎಂದು ಅರ್ಜುನ್ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಬಗೆಹರಿಸಲು 2012ರಿಂದ ವಿದ್ಯುತ್ ಇಲಾಖೆ ಅಧಿಕಾರಿಗಳು, ನೌಕರರನ್ನು ಭೇಟಿ ಮಾಡಿ ಸುಸ್ತಾಗಿ ಕುಳಿತಿದ್ದೇನೆ. ಇಲ್ಲಿಯವರೆಗೆ ಅವರು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದ್ದಾರೆ. ಆದರೆ ಇದುವರೆಗೂ ಸಮಸ್ಯೆ ಪರಿಹಾರಿಸಲು ಮಾತ್ರ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ತಹಶೀಲ್ದಾರರಿಗೂ ಹಲವಾರು ಬಾರಿ ದೂರುಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅರ್ಜುನ್ ಹೇಳಿದ್ದಾರೆ.
ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ವಿದ್ಯುತ್ ಬಿಲ್ ರದ್ದುಪಡಿಸಿ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಇ. ಹರಿಶಂಕರ್ ಹೇಳಿದ್ದಾರೆ.