ಬೀಡ್(ಮಹಾರಾಷ್ಟ್ರ): ಎಲೆಕ್ಟ್ರಿಕಲ್ ವಾಟರ್ ಹೀಟರ್ನಿಂದ ವಿದ್ಯುತ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಿಂಪಲಗಾಂವ್ನಲ್ಲಿ ಸಂಭವಿಸಿದೆ. ಜ್ಞಾನೇಶ್ವರ್ ಸುರವ್ಸೆ ಹಾಗೂ ಸಿಂಧೂಬಾಯಿ ಸುರವ್ಸೆ ಮೃತ ದಂಪತಿ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಜ್ಞಾನೇಶ್ವರ್ ಬಾತ್ ರೂಂನಲ್ಲಿ ವಾಟರ್ ಹೀಟರ್ ಅಳವಡಿಸಿ ಬ್ರಶ್ ಮಾಡಿದ್ದಾರೆ. ಬಳಿಕ ಸ್ನಾನಕ್ಕೆ ತೆರಳಿದಾಗ ಹೀಟರ್ನಿಂದ ಶಾಕ್ ಹೊಡೆದಿದೆ. ಪತಿಯ ಕಿರುಚಾಟ ಕೇಳಿ ಪತ್ನಿ ಸಿಂಧೂಬಾಯಿ ಅವರ ಬಳಿ ಓಡಿ ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತರ ಮಗಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿ ಅತ್ಯಂತ ಶ್ರಮಜೀವಿಗಳು. ಬಡ ಕುಟುಂಬದವರಾದ ಇವರು, ಹೋಟೆಲ್ ನಡೆಸಿ ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದರು. ಈ ಭಾಗದ ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹಿಂದಿನ ಕಾಲದ ತರಹ ಈಗ ನೀರು ಕಾಯಿಸಲು ಸೌದೆ ಒಲೆಗಳು ಇಲ್ಲ. ನಗರ ಪ್ರದೇಶದಲ್ಲಿರುವ ಜನರಿಗೆ ಹಾಗೆಂದರೇನು ಎಂದು ಗೊತ್ತೇ ಇರುವುದಿಲ್ಲ. ಈಗೇನಿದ್ದರೂ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಯುಗ. ಸಣ್ಣ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಕೂಡ ನೀರು ಬಿಸಿ ಮಾಡಿಕೊಳ್ಳಲು ವಾಟರ್ ಹೀಟರ್ ಅಥವಾ ಗೀಜರ್ ಬಳಕೆ ಆಗುತ್ತಿದೆ. ಇವುಗಳು ಉಪಯುಕ್ತವಾದರೂ ಬಳಸುವಾಗ ಎಚ್ಚರಿಕೆ ಅಗತ್ಯ.
ಇದನ್ನೂ ಓದಿ: ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಹೋದ ಮಗಳು: ಅಂಗಡಿಯಲ್ಲಿ ಫ್ರಿಡ್ಜ್ನ ಶಾಕ್ನಿಂದ ಸಾವು
ಪ್ಲಾಸ್ಟಿಕ್ ಬಕೆಟ್ ಬಳಸಿ: ಚಳಿಗಾಲದಲ್ಲಿ ಬಿಸಿ ನೀರು ಬೇಕಾಗುತ್ತದೆ. ಕೆಲವರು ನೀರನ್ನು ಬಿಸಿಮಾಡಲು ಸ್ಟೀಲ್ ಪಾತ್ರೆ ಬಳಸುತ್ತಾರೆ. ಹಾಗಾಗಿ ವಾಟರ್ ಹೀಟರ್ನ್ನು ಪಾತ್ರೆ ಒಳಗೆ ಅಳವಡಿಸಿದ ನಂತರ ಶಾಕ್ ಹೊಡೆಯುವ ಸಾಧ್ಯತೆ ಹೆಚ್ಚು. ಹಾಗಾಗಿ ಪ್ಲಾಸ್ಟಿಕ್ ಬಕೆಟ್ ಬಳಸಿ. ಸಣ್ಣ ತಪ್ಪು ಕೂಡ ನಿಮ್ಮ ಜೀವವನ್ನೇ ಬಲಿ ಪಡೆಯಬಹುದು. ಹಾಗಾಗಿ ಹೆಚ್ಚು ಜಾಗರೂಕರಾಗಿರಿ.
ಬಕೆಟ್‌ನಲ್ಲಿ ಹಾಕಿದ ನಂತರ ಸ್ವಿಚ್ ಆನ್ ಮಾಡಿ: ಅನೇಕ ಜನರು ವಾಟರ್ ಹೀಟರ್ನ್ನು ತುಂಬಾ ತಪ್ಪು ರೀತಿಯಲ್ಲಿ ಬಳಸುತ್ತಾರೆ. ಅಂದರೆ ಸ್ವಿಚ್ ಆನ್ ಮಾಡಿ ನಂತರ ಅದನ್ನು ಬಕೆಟ್‌ನಲ್ಲಿ ಹಾಕುತ್ತಾರೆ. ಆದ್ದರಿಂದ ಶಾಕ್ ಹೊಡೆಯುವ ಸಾಧ್ಯತೆ ಹೆಚ್ಚು. ವಾಟರ್ ಹೀಟರ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು.
ನಾಲ್ವರು ರೈತರ ದಾರುಣ ಸಾವು: ವಿದ್ಯುತ್ ಅವಘಡಗಳು ಹೆಚ್ಚಾಗಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ನದಿಗೆ ಮೋಟಾರ್ ಅಳವಡಿಸುವಾಗ ಉಂಟಾದ ಎಲೆಕ್ಟ್ರಿಕಲ್ ಶಾಕ್ನಿಂದಾಗಿ ನಾಲ್ವರು ರೈತರು ಸಾವನ್ನಪ್ಪಿರುವ ಘಟನೆ ಪುಣೆಯ ಬೊಹರ್ ತಾಲೂಕಿನ ನಿಗ್ಡೆ ಗ್ರಾಮದಲ್ಲಿ ನಡೆದಿತ್ತು. ವಿಠ್ಠಲ್ ಸುದಮ್ ಮಾಲುಸಾರೆ, ಸನ್ನಿ ವಿಠ್ಠಲ್ ಮಾಲುಸಾರೆ, ಅಮೋಲ್ ಚಂದ್ರಕಾಂತ ಮಾಲುಸಾರೆ ಹಾಗೂ ಆನಂದ ಜ್ಞಾನೋಬ ಜಾಧವ್ ಎಂಬುವರು ಮೃತಪಟ್ಟಿದ್ದರು. ಅಜಾಗರೂಕತೆಯಿಂದ ರೈತರು ಪ್ರಾಣ ಕಳೆದುಕೊಳ್ಳುವಂತಾಯಿತು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ನದಿಗೆ ಮೋಟರ್ ಅಳವಡಿಸುವಾಗ ವಿದ್ಯುತ್ ಶಾಕ್; ನಾಲ್ವರು ರೈತರ ದಾರುಣ ಸಾವು