ನವದೆಹಲಿ: ದೇಶದಲ್ಲಿ ಚುನಾವಣಾ ಬಾಂಡ್ ಸುದ್ದಿಯಲ್ಲಿದ್ದು ಇದೀಗ ಸುಪ್ರೀಂ ಕೋರ್ಟ್ ಕೆವೈಸಿಗಿಂತ ಚುನಾವಣಾ ಬಾಂಡ್ ಯೋಜನೆ ಹೆಚ್ಚು ಉಪಕಾರಿಯಾಗಿದೆ ಎಂಬುದನ್ನು ಗಮನಿಸಿದೆ. ಕೋರ್ಟ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಇದರ ಮಧ್ಯೆ ಈ ಚುನಾವಣಾ ಬಾಂಡ್ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಗಿಂತ ಹೆಚ್ಚು ಪ್ರಯೋಜನಕಾರಿ, ಮತ್ತು ಈ ಯೋಜನೆ ಹೊಸ ಬದಲಾವಣೆಯನ್ನು ತಂದಿದೆ. ಹಾಗೂ ರಾಜಕೀಯ ಪಕ್ಷಗಳ ಹಣದ ಎಲ್ಲಾ ನಗದು ಮೂಲಗಳನ್ನು ಬತ್ತಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು, ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸುವ ಉತ್ತರವಲ್ಲ ಅಥವಾ ಆಧಾರವಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ವಕೀಲ ಪ್ರಶಾಂತ್ ಭೂಷಣ್, ತಮ್ಮ ಮರುವಾದದಲ್ಲಿ, 'ಈ ಯೋಜನೆಯು ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ ಮತ್ತು ಇದು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತದೆ. ಏಕೆಂದರೆ ಯಾವುದೇ ಕಂಪನಿಯು ಅಧಿಕಾರದಲ್ಲಿರುವ ಪಕ್ಷಗಳಿಗೆ ಅನಾಮಧೇಯವಾಗಿ ಕಿಕ್‌ಬ್ಯಾಕ್ ನೀಡಲು ಅವಕಾಶ ನೀಡುತ್ತದೆ. ಎಂದು ವಾದಿಸಿದರು. ಜತೆಗೆ ಬಹುತೇಕ ಎಲ್ಲಾ ಚುನಾವಣಾ ಬಾಂಡ್‌ಗಳು ಕೇಂದ್ರ ಮತ್ತು ರಾಜ್ಯಗಳ ಆಡಳಿತ ಪಕ್ಷಗಳಿಗೆ ತಲುಪಿವೆ ಎಂದು ತೋರಿಸಲು ಸಾಕಷ್ಟು ಸಾಕ್ಷಿಗಳಿವೆ. ಹಾಗೂ ಖರೀದಿಸಿದ ಎಲೆಕ್ಟೋರಲ್ ಬಾಂಡ್‌ಗಳಲ್ಲಿ ಶೇಕಡಾ 94 ರಷ್ಟು 1 ಕೋಟಿ ರೂ. ಮತ್ತು ಉಳಿದವು 10 ಲಕ್ಷ ರೂ. ಆಗಿದೆ. ಖಾಸಗಿತನದ ಹಕ್ಕು, ಸರ್ಕಾರ ಎತ್ತಿರುವ ವಾದವನ್ನು ಕಂಪನಿಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ, ಏಕೆಂದರೆ ಅದು ವೈಯಕ್ತಿಕ ಹಕ್ಕು.
ಆದಾಯ ತೆರಿಗೆ ಕಾಯಿದೆ ಮತ್ತು ಕಂಪನಿಗಳ ಕಾಯಿದೆಗೆ ಮಾಡಿದ ತಿದ್ದುಪಡಿಗಳನ್ನು ಪ್ರಶ್ನಿಸಿದ ವಕೀಲ ಭೂಷಣ್, ಇದು ಕಂಪನಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಅನಾಮಧೇಯಗೊಳಿಸುತ್ತದೆ ಮತ್ತು ಬಹಿರಂಗಪಡಿಸುವ ಅಗತ್ಯವನ್ನು ತೆಗೆದುಹಾಕಿದೆ ಎಂದರು. ಮುಖ್ಯವಾಗಿ ರಾಜಕೀಯ ಪಕ್ಷಕ್ಕೆ ಯಾರು ಧನಸಹಾಯ ಮಾಡುತ್ತಿದ್ದಾರೆ , ರಾಜಕೀಯ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ ಎಂದು ಒತ್ತಿ ಹೇಳಿದರು.
ಭೂಷಣ್ ಹೇಳಿಕೆಗೆ ನ್ಯಾಯಮೂರ್ತಿ ಖನ್ನಾ ಅವರು , ನಿಜವಾಗಿಯೂ ನಿಮ್ಮ ಕೋರಿಕೆ ಏನು? ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಲು ನೀವು ಕೇಳಿಕೊಳ್ಳುತ್ತಿದ್ದೀರಾ? ಅಥವಾ ಇದರ ಬಗ್ಗೆ ಬಹಿರಂಗ ಪಡಿಸಬೇಕೆಂದು ನೀವು ಬಯಸುತ್ತೀರಾ ಎಂದು ಕೇಳಿದರು. ಇದಕ್ಕೆ ಭೂಷಣ್ ಅವರು, "ಅನಾಮಧೇಯತೆಯನ್ನು ತೆಗೆದುಹಾಕಿದರೆ ಪರವಾಗಿಲ್ಲ, ನನಗೆ ಯಾವುದೇ ತೊಂದರೆ ಇಲ್ಲ, ಅನಾಮಧೇಯತೆಯನ್ನು ತೆಗೆದುಹಾಕಿ ನನಗೆ ಚುನಾವಣಾ ಬಾಂಡ್‌ಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದರು. ನಗದು ದೇಣಿಗೆಯನ್ನು ಇಲ್ಲಿಯವರೆಗೆ ಉಸಿರುಗಟ್ಟಿಸಲಾಗಿಲ್ಲ ಎಂದು ಭೂಷಣ್ ಒತ್ತಿ ಹೇಳಿದರು. ಈ ನಡುವೆ ಎರಡೂ ಕಡೆ ವಾದ - ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಇದನ್ನೂ ಓದಿ: 'ಪಾರದರ್ಶಕತೆ ಕೊರತೆ': ಚುನಾವಣಾ ಬಾಂಡ್‌ಗಳ 'ಆಯ್ದ ಅನಾಮಧೇಯತೆ' ಬಗ್ಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್