ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಈ ಮೂಲಕ ಕಳೆದ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಸತತ ಎರಡನೇ ಸಲ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗುವತ್ತ ದಾಪುಗಾಲು ಇಟ್ಟಿದೆ. ಇದರ ಜೊತೆಗೆ ಯೋಗಿ ಆದಿತ್ಯನಾಥ್ ಸಿಎಂ ಆಗಿ ಮತ್ತೆ ಆಯ್ಕೆಯಾದರೆ ನಾಲ್ಕು ದಾಖಲೆ ಬರೆಯಲಿದ್ದಾರೆ.
2017ರಲ್ಲಿ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಯಾರೋ ಸಹ ಉಹೇ ಮಾಡದ ರೀತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಭಾರತೀಯ ಜನತಾ ಪಾರ್ಟಿ, ಇದೀಗ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ತೀವ್ರ ಸ್ಪರ್ಧೆ ನೀಡಿದ ಅಖಿಲೇಶ್ ಯಾದವ್ ಮುನ್ನಡೆಯಲ್ಲಿ ಶತಕ ದಾಟಿದ್ರೂ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.
ಕೇಂದ್ರ ಸರ್ಕಾರ ಜಾರಿಗೆ ತೆಗೆದುಕೊಂಡು ಬಂದಿದ್ದ ಕೃಷಿ ಕಾಯ್ದೆ ಯೋಜನೆಗಳಿಗೆ ಆಕ್ರೋಶ ವ್ಯಕ್ತವಾದ ಹೊರತಾಗಿ ಕೂಡ, ಯೋಗಿ ಆದಿತ್ಯನಾಥ್ ತೆಗೆದುಕೊಂಡಿರುವ ಕೆಲವೊಂದು ಅಭಿವೃದ್ಧಿ ಪರ ಕೆಲಸಗಳು ಪಕ್ಷಕ್ಕೆ ವರವಾಗಿವೆ. ಯೋಗಿ-ಮೋದಿ ಜೋಡಿ ಮಾಡಿದ ಪ್ರಚಾರದ ಅಬ್ಬರ ಹಾಗೂ ಮೋದಿ ಅವರ ‘ಡಬಲ್ ಎಂಜಿನ್’ ಸರ್ಕಾರದ ಮಂತ್ರ ಬಿಜೆಪಿಗೆ ವರವಾಗಿದೆ.
ಕಳೆದ 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಉತ್ತರ ಪ್ರದೇಶ 21 ಸಿಎಂಗಳನ್ನ ಕಂಡಿದ್ದು, ಆದರೆ, ಕೇವಲ ಮೂವರು ಮಾತ್ರ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಬಿಎಸ್ಪಿ ಅಧಿನಾಯಕಿ ಮಾಯಾವತಿ 2007-2012ರಲ್ಲಿ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 2012-2017ರ ಅವಧಿಯಲ್ಲಿ ಅಧಿಕಾರ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಅವರು ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಮೂರನೇ ಮುಖ್ಯ ಮಂತ್ರಿಯಾಗಲಿದ್ದಾರೆ.
ಈ ಸಲ ಗೋರಖ್ಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾದರೆ 15 ವರ್ಷದ ಬಳಿಕ ವಿಧಾನಸಭೆಯಿಂದ ಆಯ್ಕೆಯಾದ ಶಾಸಕರು ಸಿಎಂ ಆದಂತಾಗುತ್ತದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ಹಾಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.
2017ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ 312, ಎಸ್ಪಿ 47, ಬಿಎಸ್ಪಿ 19 ಕ್ಷೇತ್ರ ಹಾಗೂ ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 250ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.