ಚೆನ್ನೈ (ತಮಿಳುನಾಡು): ದೇಶದಲ್ಲಿ ಕೋವಿಡ್ ಸಾವು-ನೋವು ಹೆಚ್ಚಲು ಭಾರತೀಯ ಚುನಾವಣಾ ಆಯೋಗವೇ (ಇಸಿಐ) ಕಾರಣ ಎಂದು ಆರೋಪಿಸಿರುವ ಮದ್ರಾಸ್ ಹೈಕೋರ್ಟ್, ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ 'ಕೊಲೆ ಪ್ರಕರಣ' ದಾಖಲಿಸಬೇಕು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದೆ.
ಕೊರೊನಾ ಎರಡನೇ ಅಲೆಯ ಸುಳಿಯಲ್ಲಿ ದೇಶವು ಸಿಲುಕುತ್ತಿರುವ ವೇಳೆಯಲ್ಲಿ ತಮಿಳುನಾಡು ಸೇರಿದಂತೆ ಇತರ ಕೆಲ ರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ ಸೇರಿದಂತೆ ದೊಡ್ಡ ಮಟ್ಟದ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದಕ್ಕಾಗಿ ನ್ಯಾಯಾಲಯ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಾಂಕ್ರಾಮಿಕದ 2ನೇ ಅಲೆಗೆ ಚುನಾವಣಾ ಆಯೋಗವು 'ಏಕೈಕ ಜವಾಬ್ದಾರಿಯಾಗಿದೆ' ಎಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಬಂತೆಂದು ಧರ್ಮಪತ್ನಿಯನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ
ಈ ಸಂಬಂಧದ ಅರ್ಜಿಯೊಂದರ ವಿಚಾರಣೆ ವೇಳೆ, ಸೋಂಕು ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕೀಲರೊಬ್ಬರು ಹೇಳಿದಾಗ, "ಚುನಾವಣಾ ರ‍್ಯಾಲಿಗಳು ನಡೆಯುವ ವೇಳೆ ನೀವು ಇನ್ನೊಂದು ಗ್ರಹದಲ್ಲಿದ್ದಿರಾ?" ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಆರೋಗ್ಯವು ಅತ್ಯಂತ ಮಹತ್ವದ್ದಾಗಿದ್ದು, ದೇಶದ ಅಧಿಕಾರಿಗಳಿಗೆ ಈ ವಿಚಾರವನ್ನು ನೆನಪಿಸಬೇಕಾಗಿರುವುದು ವಿಷಾದಕರ ಸಂಗತಿಯಾಗಿದೆ. ಜನರು ಬದುಕಿದ್ದರೆ ಮಾತ್ರ ಪ್ರಜಾಪ್ರಭುತ್ವ ಗಣರಾಜ್ಯ ನೀಡುವ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.