ಹೈದರಾಬಾದ್: ತೆಲಂಗಾಣ ಚುನಾವಣಾ ಕಣದಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಗ್ದಾಳಿ ಜೋರಾಗಿದೆ. ಚುನಾವಣಾ ರ್ಯಾಲಿಯಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಸಿಎಂ ಕೆ.ಚಂದ್ರಶೇಖರ್ರಾವ್ ಅವರಿಗೆ ಚುನಾವಣಾ ಆಯೋಗ ಶನಿವಾರ ಮಾತಿನ ಮೇಲೆ ನಿಗಾ ಇಡಲು ಸಲಹೆ ನೀಡಿದೆ. ಅಲ್ಲದೇ, ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಲು ಸೂಚಿಸಿದೆ.
ಅಕ್ಟೋಬರ್ 30ರಂದು ಮುಖ್ಯಮಂತ್ರಿ ಕೆಸಿಆರ್ ಬಾನ್ಸವಾಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಎನ್ಎಸ್ಯುಐ ಅಧ್ಯಕ್ಷರು ದ್ವೇಷ ಭಾಷಣ ಆರೋಪ ಮಾಡಿ ಆಯೋಗಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಆಯೋಗ, ಚುನಾವಣಾ ಪ್ರಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ನಾಯಕರು, ಸ್ಪರ್ಧಿಸುವ ಅಭ್ಯರ್ಥಿಗಳು ಸಂಯಮ, ಸಭ್ಯತೆ ಮತ್ತು ಉತ್ತಮ ನಡವಳಿಕೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಇನ್ನೊಂದೆಡೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಚುನಾವಣಾ ಆಯೋಗವು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ, ಸಚಿವ ಕೆ.ಟಿ.ರಾಮರಾವ್ ಅವರಿಗೂ ನೋಟಿಸ್ ಜಾರಿ ಮಾಡಿದೆ. ಉದ್ಯೋಗ ನೇಮಕಾತಿ ಘೋಷಣೆಯ ಬಗ್ಗೆ ನೀಡಿದ ಹೇಳಿಕೆಗೆ ಉತ್ತರಿಸಲು ಸೂಚಿಸಲಾಗಿದೆ.
ರಾಹುಲ್ ವಿರುದ್ಧ ಕೆಟಿಆರ್ ಟೀಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇತಿಹಾಸದ ಬಗ್ಗೆ ಜ್ಞಾನವಿಲ್ಲ. ತೆಲಂಗಾಣವನ್ನು ಆಂಧ್ರಪ್ರದೇಶಕ್ಕೆ ಒತ್ತಾಯಪೂರ್ವಕವಾಗಿ ಸೇರ್ಪಡೆ ಮಾಡಲಾಗಿತ್ತು. ಅಖಂಡ ಆಂಧ್ರದಿಂದ ಬೇರ್ಪಟ್ಟ ಬಳಿಕ ರಾಜ್ಯ ಅಭಿವೃದ್ಧಿ ಕಂಡಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಅರಿವು ಕಡಿಮೆ ಎಂದು ಸಚಿವ ಕೆಟಿ ರಾಮರಾವ್ ಟೀಕಿಸಿದರು.
ತೆಲಂಗಾಣ ಮತ್ತು ಆಂಧ್ರವನ್ನು ವಿಲೀನ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ತೆಲಂಗಾಣ ಜನರಲ್ಲಿ ಕ್ಷಮೆಯಾಚಿಸಬೇಕು. ರಾಹುಲ್ ಗಾಂಧಿ ಭಾಷಣ ಮಾಡಿದ ನಿಜಾಮಾಬಾದ್ನಲ್ಲಿ ನಿಂತುಕೊಂಡು ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಆಂಧ್ರ ಮತ್ತು ತೆಲಂಗಾಣ ಜೋಡಿಸಿದ್ದರು. ಇದು ದೊಡ್ಡ ಪ್ರಮಾದವಾಗಿತ್ತು. 1952 ರಲ್ಲಾದ ತಪ್ಪಿಗೆ ಜೂನ್ 2, 2014 ರಂದು ಮುಕ್ತಿ ಸಿಕ್ಕಿತು. ಕೆ ಚಂದ್ರಶೇಖರ್ ರಾವ್ ಅವರು ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಾಸ್ಯ ಕೊನೆಗೊಂಡಿತು ಎಂದರು.
ಬಿಜೆಪಿ ಗೆದ್ದರೆ ಹಿಂದುಳಿದ ವರ್ಗದ ವ್ಯಕ್ತಿ ಸಿಎಂ: ತೆಲಂಗಾಣದಲ್ಲಿ ಅಸ್ತಿತ್ವ ಹುಡುಕುತ್ತಿರುವ ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುತ್ತಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಿಆರ್‌ಎಸ್ ಸರ್ಕಾರದ ಆಡಳಿತದಿಂದ ಬೇಸತ್ತ ಜನರು ತೆಲಂಗಾಣದಲ್ಲಿ ಬದಲಾವಣೆ ಬಯಸಿದ್ದಾರೆ. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಹಿಂದುಳಿದ ವರ್ಗಗಳು ಮತ್ತು ದಲಿತರಿಗಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ತೆಲಂಗಾಣದಲ್ಲಿ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಹೀಗಾಗಿ ಹಿಂದುಳಿದ ವರ್ಗದ ಜನರ ಉತ್ಸಾಹ ಇಮ್ಮಡಿಯಾಗಿದೆ. ಜನರು ಬಿಜೆಪಿಯ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿದ್ದಾರೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಆಡಳಿತಾರೂಢ ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
119 ಸ್ಥಾನಗಳಿಗೆ ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಭಯೋತ್ಪಾದನೆಯನ್ನು ಸಮರ್ಥವಾಗಿ ಹತ್ತಿಕ್ಕಲಾಗಿದೆ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ