ನವದೆಹಲಿ: ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಸೇರಿದಂತೆ ಐದು ರಾಜ್ಯಗಳ ಐದು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಶನಿವಾರ ಘೋಷಿಸಿದೆ.
ಚುನಾವಣೆ ಆಯೋಗದ ಪ್ರಕಾರ, ಈ ಎಲ್ಲ ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಒಡಿಶಾ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ತಲಾ ಒಂದು ವಿಧಾನಸಭೆ ಕ್ಷೇತ್ರ ಮತ್ತು ಯುಪಿಯ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದೆ.
ಒಡಿಶಾದ ಪದ್ಮಾಪುರ್, ರಾಜಸ್ಥಾನದ ಸರ್ದಾರ್‌ಶಹರ್, ಬಿಹಾರದ ಕುರ್ಹಾನಿ, ಛತ್ತೀಸ್‌ಗಢದ ಭಾನುಪ್ರತಾಪುರ್ (ಎಸ್‌ಟಿ ಮೀಸಲು) ಮತ್ತು ಯುಪಿಯ ರಾಂಪುರಕ್ಕೆ ಉಪಚುನಾವಣೆ ಜರುಗಲಿದೆ. ಇದಲ್ಲದೆ, ಚುನಾವಣಾ ಆಯೋಗವು ಯುಪಿಯ ಮೈನ್‌ಪುರಿ ಲೋಕಸಭೆಯ ಕ್ಷೇತ್ರಕ್ಕೂ ಉಪಚುನಾವಣೆ ಘೋಷಿಸಿದೆ.
ಮೈನ್‌ಪುರಿ ಮುಲಾಯಂ ಸಿಂಗ್ ಪ್ರತಿನಿಧಿಸಿದ ಕ್ಷೇತ್ರ: ದೀರ್ಘಕಾಲದ ಅನಾರೋಗ್ಯದಿಂದ ಹಿಂದಿನ ತಿಂಗಳು ನಿಧನರಾದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ.
ರಾಮ್‌ಪುರದ ಶಾಸಕ ಎಸ್‌ಪಿ ನಾಯಕ ಮೊಹಮ್ಮದ್ ಅಜಂ ಖಾನ್ ಅವರನ್ನು ಅನರ್ಹಗೊಳಿಸಿದ ನಂತರ ಉತ್ತರ ಪ್ರದೇಶದ ರಾಂಪುರ ವಿಧಾನಸಭಾ ಸ್ಥಾನ ತೆರವಾಗಿತ್ತು. ಏಪ್ರಿಲ್ 2019ರಲ್ಲಿ ಅವರ ವಿರುದ್ಧ ದಾಖಲಾದ ದ್ವೇಷ ಭಾಷಣದ ಪ್ರಕರಣದಲ್ಲಿ ದೋಷಿ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದರು.
ಈ ಕ್ಷೇತ್ರದ ಚುನಾವಣೆಗೆ ನವೆಂಬರ್ 10 ರಂದು ಅಧಿಸೂಚನೆ ಹೊರಡಿಸಿದ ಬಳಿಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ನವೆಂಬರ್ 17 ಕೊನೆಯ ದಿನ. ನಾಮಪತ್ರ ಹಿಂಪಡೆಯಲು ನವೆಂಬರ್ 21 ಕೊನೆಯ ದಿನ ಆಗಿದೆ. ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಚುನಾವಣೆಯ ಮತ ಎಣಿಕೆ ನಡೆಯಲಿದೆ.
ಗುಜರಾತ್ನಲ್ಲಿ ಎರಡು ಹಂತದ ಮತದಾನ: ಇದಕ್ಕೂ ಮುನ್ನ ಚುನಾವಣಾ ಆಯೋಗವು ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು 89 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ:ಗುಜರಾತ್ ಚುನಾವಣಾ ಕಣಕ್ಕೆ ಆಪ್ ಎಂಟ್ರಿ: ದಶಕಗಳ ನಂತರ ತ್ರಿಕೋನ ಸ್ಪರ್ಧೆ