ಮಿರ್ಜಾಪುರ: ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ನಿರ್ದೇಶಕ ಸತೀಶ್ ಕೌಶಿಕ್ ಅವರ 'ಕಾಗಜ್' ಚಿತ್ರ ಈ ದಿನಗಳಲ್ಲಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಸರ್ಕಾರಿ ಯಂತ್ರೋಪಕರಣಗಳ ನಿರ್ಲಕ್ಷ್ಯದಿಂದಾಗಿ ಬದುಕಿದ ವ್ಯಕ್ತಿಯನ್ನು ಕಾಗದದ ಮೇಲೆ ಸತ್ತಿರುವಂತೆ ತೋರಿಸುವ ಈ ಚಿತ್ರ ಅಜಮ್ಗಢ್ದ ಲಾಲ್ ಬಿಹಾರಿ ಅವರ ಜೀವನಾಧರಿತ ಸಿನೆಮಾ. ಆದ್ರೆ ಇಂದಿಗೂ ಮಿರ್ಜಾಪುರ ಜಿಲ್ಲೆಯಲ್ಲಿ ಮೂರು - ಮೂರು ಲಾಲ್ ಬಿಹಾರಿಗಳಿದ್ದಾರೆ.
ಹೌದು, ಕೆಲವರು 20 ವರ್ಷಗಳಿಂದ ತಮ್ಮನ್ನು ಜೀವಂತವಾಗಿ ಸಾಬೀತುಪಡಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. 'ಸರ್, ನಾನು ಜೀವಂತವಾಗಿದ್ದೇನೆ, ನಾವು ಸಹ ಮನುಷ್ಯರೇ ದೆವ್ವ-ಭೂತಗಳಲ್ಲ' ಎಂದು ತಮ್ಮನ್ನು ಜೀವಂತವಾಗಿ ಸಾಬೀತುಪಡಿಸಲು ಅಸಹಾಯಕ ಬಡ ಹಿರಿಯರೊಬ್ಬರು ಬೋರ್ಡ್ ಹಿಡಿದು ಕಚೇರಿ ಮುಂದೆ ವಿನೂತವಾಗಿ ಪ್ರತಿಭಟಿಸುತ್ತಿದ್ದಾರೆ.
ಸತ್ಯ ಘಟನೆಯ ಆಧಾರಿತ ಅಜಮ್ಗಢ್ದ ಲಾಲ್ ಬಿಹಾರಿ ಸಾವಿನ ಕುರಿತು ಮಾಡಿದ 'ಕಾಗಜ್' ಚಿತ್ರವು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಅದಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಬದುಕಿದವರನ್ನು ಮೃತಪಟ್ಟಿರುವುದಾಗಿ ನಮೂದಿಸಿರುವುದು ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಘಟನೆ ಒಂದಲ್ಲ ಮೂರು ಪ್ರಕರಣಗಳು ಮಿರ್ಜಾಪುರದಲ್ಲಿ ವರದಿಯಾಗಿವೆ. ಅವರು 'ಸರ್ ನಾನು ಜೀವಂತವಾಗಿದ್ದೇನೆ, ಸರ್ ನಾವು ಸಹ ಮನುಷ್ಯರು, ಭೂತವಲ್ಲ' ಎಂದು ಹೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಅಮೋಯಿಯ ಭೋಲಾ ಸಿಂಗ್ ಕಳೆದ 20 ವರ್ಷಗಳಿಂದ ಖತೌನಿಯಲ್ಲಿ ಕಂದಾಯ ನಿರೀಕ್ಷಕ ಮತ್ತು ಅಕೌಂಟೆಂಟ್ ಕಚೇರಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಆದ್ರೆ ಅವರು ನಾನು ಸಾವನ್ನಪ್ಪಿಲ್ಲ ಇನ್ನೂ ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಕಚೇರಿಯಿಂದ ಕಚೇರಿಗೆ ಕಳೆದ 20 ವರ್ಷಗಳಿಂದ ಅಲೆದಾಡುತ್ತಿದ್ದಾರೆ.
ಚಿಲ್ಹ್‌ನ 70 ವರ್ಷದ ರಘುನಾಥ್ ಗುಪ್ತಾ, ಅವರು ಪಿಂಚಣಿ ಹಣವನ್ನು ಹಿಂಪಡೆಯಲು ಬ್ಯಾಂಕ್‌ಗೆ ಹೋದಾಗ ಅಲ್ಲಿ ನಗದು ಕೌಂಟರ್‌ನಲ್ಲಿ ಕುಳಿತಿದ್ದ ಉದ್ಯೋಗಿಯೊಬ್ಬರು ಈ ಹೆಸರಿನ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೂರನೇ ವ್ಯಕ್ತಿ ಬೌತಾ ವಿಶೇಶ್ ಸಿಂಗ್ ಗ್ರಾಮದ ನಿವಾಸಿಯಾದ 72 ವರ್ಷದ ಕಬೀರ್ ದಾಸ್ ಬಿಂಡ್ ತಮ್ಮ ಗ್ರಾಮ ಸಭೆಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದರ ಬಗ್ಗೆ ಆಗ್ರಹಿಸಿದರು. ಆದ್ರೆ ಗ್ರಾಮದ ಮುಖ್ಯಸ್ಥ ಕಬೀರ್ ದಾಸ್ ಬಿಂಡ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅವರು ವಸತಿ ವಂಚಿತರಾಗಿದ್ದಾರೆ.
ಮೂವರೂ ಸದರ್ ತಾಲೂಕಿನ ನಿವಾಸಿಗಳು. ಈಟಿವಿ ಭಾರತ ಸದರ್ ತಾಲೂಕಿನ ಉಪವಿಭಾಗಾಧಿಕಾರಿ ಗೌರವ್ ಶ್ರೀವಾಸ್ತವ್ ಅವರನ್ನು ಕೇಳಿದಾಗ, ಈ ವಿಷಯವು ಗಮನಕ್ಕೆ ಬಂದಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.