ಮುಂಬೈ: ನಮ್ಮ ಪಾತ್ರದಲ್ಲಿ ನಂಬಿಕೆ ಇರುವವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುಂದುವರಿಸಲು ಬಯಸುತ್ತೇವೆ. ಅದನ್ನು ಇಷ್ಟಪಡುವವರು ನಮ್ಮ ಜೊತೆ ಬರುತ್ತಾರೆ. ಬಂಡಾಯಗಾರರು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ ಎಂದು ಶಿಂಧೆ ಪುನರುಚ್ಚರಿಸಿದ್ದಾರೆ.
ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಶಿವಸೇನೆಯಲ್ಲೇ ಕಾನೂನಿನ ಭಾಷೆ ಮಾತನಾಡಲು ಆರಂಭಿಸಿದ್ದಾರೆ. ಬಂಡಾಯ ಗುಂಪಿನ 12 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶಿವಸೇನೆಯು ವಿಧಾನಸಭೆಯ ಉಸ್ತುವಾರಿ ಸ್ಪೀಕರ್‌ಗೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಿಂಧೆ, ನಮ್ಮನ್ನು ಹೆದರಿಸಲು ಯಾರು ಯತ್ನಿಸುತ್ತಿದ್ದಾರೆಂದು ನಮಗೂ ಗೊತ್ತಿದೆ ಎಂದು ಅರವಿಂದ್ ಸಾವಂತ್ಗೆ ಖಾರವಾಗಿ ಉತ್ತರಿಸಿದ್ದಾರೆ.
ನಮಗೆ ಕಾನೂನು ಗೊತ್ತಿದೆ: ಪಕ್ಷ ಸಂಘಟನೆಯ ಸಭೆಗೆ ಹಾಜರಾಗದ ಕಾರಣ ನಮ್ಮ 12 ಶಾಸಕರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶಿವಸೇನೆ ಒತ್ತಾಯಿಸಿದೆ. ಈ ಬಗ್ಗೆ ಅರವಿಂದ್ ಸಾವಂತ್ ಮಾಹಿತಿ ನೀಡಿದ್ದರು. ಸಾವಂತ್ಗೆ ಖಾರವಾಗಿ ಉತ್ತರಿಸಿದ ಏಕನಾಥ್ ಶಿಂಧೆ, ನೀವು ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ?.. ನಿಮ್ಮ ಬಣ್ಣ ಮತ್ತು ಕಾನೂನು ಕೂಡ ನಮಗೆ ತಿಳಿದಿದೆ. ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ ವಿಪ್ ಅನ್ನು ವಿಧಾನಸಭೆಯ ಕೆಲಸಕ್ಕೆ ಬಳಸಲಾಗುತ್ತದೆ ಹೊರತು ಸಭೆಗಳಿಗೆ ಅಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಿವೆ ಎಂದು ಕಾನೂನಿನ ಬಗ್ಗೆ ಪಾಠ ಮಾಡಿದರು.
ಓದಿ: ಶಾಸಕಾಂಗ ಪಕ್ಷದ ನಾಯಕ ಶಿಂಧೆ ಎಂದ ಬಂಡಾಯ ಶಾಸಕರು.. ಉಪ ಸ್ಪೀಕರ್‌ಗೆ ಪತ್ರ
ಇವರೇ 12 ಶಾಸಕರು: 12 ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಏಕನಾಥ್ ಶಿಂಧೆ, ತಾನಾಜಿ ಸಾವಂತ್, ಸಂದೀಪನ್ ಭೂಮಾರೆ, ಸಂಜಯ್ ಶಿರ್ಸಾತ್, ಅಬ್ದುಲ್ ಸತ್ತಾರ್, ಭರತ್ ಗೋಗವಾಲೆ, ಪ್ರಕಾಶ್ ಸುರ್ವೆ, ಅನಿಲ್ ಬಾಬರ್, ಬಾಲಾಜಿ ಕಿಣಿಕರ್, ಯಾಮಿನಿ ಜಾಧವ್, ಲತಾ ಸೋನಾವಾನೆ, ಮಹೇಶ ಶಿಂಧೆ ಮತ್ತು ಪಕ್ಷದ ಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ಗೆ ಮನವಿ ಮಾಡಿದೆ.
ರಾಜಕೀಯ ವಲಯದ ಬೆಳವಣಿಗೆಗಳು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಎಲ್ಲ ಐವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮಹಾವಿಕಾಸವನ್ನು ಮುಂದಿಟ್ಟಿತ್ತು. ಮಹಾವಿಕಾಸ ಅಘಾಡಿ ನಾಯಕರಿಗೆ ಈ ಆಘಾತವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಏಕನಾಥ್ ಶಿಂಧೆ ಶಿವಸೇನೆಯ ಶಾಸಕರ ದೊಡ್ಡ ಗುಂಪಿನೊಂದಿಗೆ ಗುಜರಾತ್ ತಲುಪಿದ್ದರು.
ಈಗ ಅಸ್ಸೋಂನಲ್ಲಿ ಬೀಡುಬಿಟ್ಟಿದ್ದಾರೆ. ಇದು ಶಿವಸೇನೆಗೆ ದೊಡ್ಡ ಹೊಡೆತವಾಗಿದೆ. ಈ ಬಂಡಾಯ ಶಾಸಕರ ವಾಪಸಾತಿಗೆ ಶಿವಸೇನೆ ಕಾನೂನಿನ ಭಾಷೆಯನ್ನೇ ಮಾತನಾಡತೊಡಗಿದೆ. ಆದ್ರೆ ಶಿಂಧೆಯು ಸಹ ಕಾನೂನಿನ ಭಾಷೆಯಲ್ಲೇ ಉತ್ತರಗಳನ್ನು ನೀಡುತ್ತಿದ್ದಾರೆ. 12 ಶಾಸಕರ ಸದಸ್ಯತ್ವ ರದ್ದತಿಗೆ ಶಿವಸೇನೆ ಒತ್ತಾಯಿಸಿದ ಬೆನ್ನಲ್ಲೇ ಈ ವಿಚಾರ ಬಿಸಿ-ಬಿಸಿ ಚರ್ಚೆಯಾಗಿದೆ.
ಮತ್ತೊಬ್ಬ ಶಾಸಕ ಗುವಾಹಟಿಗೆ: ಈ ನಡುವೆ ಮತ್ತೊಬ್ಬ ಶಾಸಕ ದಿಲೀಪ್ ಲೊಂಡೆ ಗುವಾಹಟಿ ಸೇರಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಶಿಂಧೆ ಬಲ ಹೆಚ್ಚುತ್ತಲೇ ಸಾಗಿದೆ.
ರಾಣೆ ವಿರುದ್ಧ ರಾವತ್ ಟೀಕಾಪ್ರಹಾರ: ಶಿವಸೇನಾ ನಾಯಕ ಸಂಜಯ್ ರಾವತ್ ನಾರಾಯಣ ರಾಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕೇಂದ್ರ ಸಚಿವರೊಬ್ಬರು ರಸ್ತೆ ತಡೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಬಂಡಾಯದ ಹಿಂದೆ ಬಿಜೆಪಿ ಅಧಿಕೃತವಾಗಿರುವುದಾದರೆ ಅದನ್ನು ಘೋಷಿಸಿ ಎಂದು ರಾಣೆಗೆ ರಾವತ್ ಸವಾಲು ಹಾಕಿದ್ದಾರೆ.
ಸರ್ಕಾರ ಉಳಿಯುತ್ತದೆ ಅಥವಾ ಹೋಗುತ್ತದೆ. ಆದರೆ, ಶರದ್ ಪವಾರ್ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಕೆಲವು ನಾಯಕರು ಶರದ್ ಪವಾರ್ ಗೆ ಬೆದರಿಕೆ ಹಾಕುವವರೆಗೂ ಹೋಗಿದ್ದಾರೆ. ಶಾಸಕರು ಮುಂಬೈಗೆ ಬಂದ ನಂತರ ಅವರ ನಿಷ್ಠೆ ಏನು ಎಂಬುದು ಗೊತ್ತಾಗುತ್ತದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಯೋಚಿಸಬೇಕು ಎಂದು ಇದೇ ವೇಳೆ ರಾವತ್ ಒತ್ತಾಯಿಸಿದ್ದಾರೆ.
ಪವಾರ್ ಬಗ್ಗೆ ರಾಣೆ ಹೇಳಿದ್ದೇನು?: ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಮೈತ್ರಿ ಸರ್ಕಾರ ಅನುಕೂಲಕ್ಕಾಗಿ ಮತ್ತು ಸ್ವಹಿತಾಸಕ್ತಿಗಾಗಿ ಈ ಸರ್ಕಾರ ರಚನೆ ಮಾಡಿದೆ. ಆದ್ದರಿಂದ ನೀವು ನಿಮ್ಮ ಕೆಲಸದ ಬಗ್ಗೆ ಜಂಬಕೊಚ್ಚಿಕೊಳ್ಳಬೇಡಿ ಎಂದು ರಾಣೆ ಟ್ವೀಟ್ನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾವತ್ ರಾಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.