ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಶಿವಸೇನೆಯ ಎರಡು ಬಣಗಳ ನಡುವೆ 'ಬಿಲ್ಲು ಮತ್ತು ಬಾಣ'ಕ್ಕಾಗಿ ಕಳೆದ 8 ತಿಂಗಳಿನಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಶುಕ್ರವಾರ ಅಂತ್ಯಗೊಂಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ಅಧಿಕೃತ 'ಶಿವಸೇನೆ' ಎಂದು ಚುನಾವಣಾ ಆಯೋಗ ಪರಿಗಣಿಸಿದೆ. ಭಾರತೀಯ ಚುನಾವಣಾ ಆಯೋಗವು (ಇಸಿಐ) ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ಘೋಷಿಸಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಮುಂಬೈನಲ್ಲಿರುವ ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಪಕ್ಷದ ಹೆಸರು 'ಶಿವಸೇನೆ' ಹಾಗೂ ಪಕ್ಷದ ಚಿಹ್ನೆ 'ಬಿಲ್ಲು ಮತ್ತು ಬಾಣ'ವನ್ನು ಏಕನಾಥ್ ಶಿಂಧೆ ಬಣ ಉಳಿಸಿಕೊಂಡಿದೆ ಎಂದು ಆಯೋಗ ಶುಕ್ರವಾರ ಆದೇಶಿಸಿದೆ.
ಉದ್ಧವ್ ಠಾಕ್ರೆ ಬಣಕ್ಕೆ ಮುಖಭಂಗ: ಏಕನಾಥ್ ಶಿಂದೆ ಬಣಕ್ಕೆ ಅಧಿಕೃತತೆ ಸಿಕ್ಕಿರುವುದರಿಂದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಮುಖಭಂಗ ಆಗಿದೆ. ಶಿವಸೇನೆ ಹೆಸರು ಹಾಗೂ ಚಿಹ್ನೆಯನ್ನು ಚುನಾವಣಾ ಆಯೋಗ ತೀರ್ಮಾನಿಸುವವರೆ ಅಮಾನತಿನಲ್ಲಿ ಇಟ್ಟಿತ್ತು. ಸದ್ಯ 2 ಬಣಗಳು ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಬಳಸುತ್ತಿವೆ. ಇದೀಗ ಏಕನಾಥ್ ಶಿಂಧೆ ಬಣ ಅಧಿಕೃತವಾಗಿ ಶಿವಸೇನೆ ಪಕ್ಷವಾಗಲಿದೆ. ಜತೆಗೆ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಪಡೆದಿದೆ.
ಶಾಸಕರ ಬಂಡಾಯದಿಂದ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ಅವರಿಗೆ ತಂದೆ ಸ್ಥಾಪಿಸಿದ ಪಕ್ಷದ ಮೂಲ ಚಿಹ್ನೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಶಿವಸೇನೆ ಪಕ್ಷದ ಹೆಸರು ಮತ್ತು ಪಕ್ಷದ ಮೂಲ ಚಿಹ್ನೆ ಬಿಲ್ಲು - ಬಾಣ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಸೇರಿದ್ದು ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಜಾಪ್ರಭುತ್ವದ ಗೆಲುವು: ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ " ಇದು ಪ್ರಜಾಪ್ರಭುತ್ವದ ಗೆಲುವು. ಇದೆಲ್ಲವೂ ಬಾಳಾ ಸಾಹೇಬ್ ಠಾಕ್ರೆಯವರ ಆಶೀರ್ವಾದದಿಂದ ನಡೆದಿದೆ. ನಾವು ಅವರ ಆಶೀರ್ವಾದದಿಂದ ಸರ್ಕಾರವನ್ನು ರಚಿಸಿದ್ದೇವೆ. ಅವರ ಸಿದ್ಧಾಂತವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಅದಕ್ಕಾಗಿಯೇ ಚುನಾವಣಾ ಆಯೋಗದ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ". ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಈ ರಾಷ್ಟ್ರ ಮುನ್ನಡೆಯುತ್ತಿದೆ. ಅದೇ ಸಂವಿಧಾನದ ಆಧಾರದ ಮೇಲೆ ನಾವು ಸರ್ಕಾರವನ್ನು ರಚಿಸಿದ್ದೇವೆ. ಅರ್ಹತೆಯ ಆಧಾರದ ಮೇಲೆ ಚುನಾವಣಾ ಆಯೋಗ ಈ ಆದೇಶ ನೀಡಿದೆ ಎಂದಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ: ಏತನ್ಮಧ್ಯೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಠಾಕ್ರೆ , ಏಕನಾಥ್ ಶಿಂಧೆ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮುಖವು ಮಹಾರಾಷ್ಟ್ರದಲ್ಲಿ ಜನರನ್ನು ಆಕರ್ಷಿಸಲು ಸಾಧ್ಯವಿಲ್ಲ. ಆಡಳಿತದಲ್ಲಿರುವ ಮೈತ್ರಿಕೂಟವು ರಾಜಕೀಯ ಲಾಭಾಂಶವನ್ನು ಗಳಿಸಲು ಇದನ್ನೆಲ್ಲ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಧವ್ ಠಾಕ್ರೆ ಬಣದ ವಕ್ತಾರ ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದು, "ನಾವು ಆತಂಕಪಡುವ ಅಗತ್ಯವಿಲ್ಲ. ಸಾರ್ವಜನಿಕರು ನಮ್ಮೊಂದಿಗಿದ್ದಾರೆ. ನಾವು ಹೊಸ ಚಿಹ್ನೆಯೊಂದಿಗೆ ಹೋಗುತ್ತೇವೆ ಮತ್ತು ಈ ಶಿವಸೇನೆಯನ್ನು ಮತ್ತೊಮ್ಮೆ ಸಾರ್ವಜನಿಕರ ಮುಂದೆ ತರುತ್ತೇವೆ" ಎಂದಿದ್ದಾರೆ. ಅಲ್ಲದೇ ಚುನಾವಣಾ ಸಮಿತಿಯ ಕ್ರಮದ ವಿರುದ್ಧ ತಮ್ಮ ಬಣ (ಶಿವಸೇನೆ - ಯುಬಿಟಿ) ಸುಪ್ರೀಂ ಕೋರ್ಟ್‌ಗೆ ಹೋಗಲಿದೆ ಎಂದು ಅವರು ಹೇಳಿದರು. ಆಯೋಗದ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿರುವ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ಪ್ರಕಟಿಸಿದೆ.
2022ರ ಜೂನ್ ತಿಂಗಳಿನಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ 'ಮಹಾವಿಕಾಸ್ ಅಘಾಡಿ' ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಬಳಿಕ ಬಿಜೆಪಿ ಶಾಸಕರ ಬೆಂಬಲ ಪಡೆದು ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.
ಇದನ್ನೂ ಓದಿ: ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್ ಕೈ ಜಾರಿದ ಬಿಲ್ಲು-ಬಾಣ