ಪಾಟ್ನಾ: ಬಾಲಿವುಡ್ನ 'ಪಿಹು' ಎಂಬ ಸಿನಿಮಾದಲ್ಲಿ ತಾಯಿ ಮೃತಪಟ್ಟಿರುವ ಬಗ್ಗೆ ತಿಳಿಯದೇ ಪುಟ್ಟ ಕಂದಮ್ಮ ಮೃತದೇಹದೊಂದಿಗೆ ರಾತ್ರಿ ಪೂರ್ತಿ ಕಳೆದಿರುತ್ತಾಳೆ. ಅಂತಹದ್ದೇ ಮನಕಲಕುವ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಕೋವಿಡ್ ಬಂದು ತಂದೆ ಸಾವನ್ನಪ್ಪಿದ್ದು, ಇದರ ಬಗ್ಗೆ ಅರಿವೇ ಇಲ್ಲದೆ 8 ವರ್ಷದ ಮಗಳು ಮೃತದೇಹದೊಂದಿಗೆ ಎರಡು ದಿನ ಕಳೆದಿದ್ದಾಳೆ.
ಪಾಟ್ನಾದ ಪೂರ್ವ ರಾಮ ಕೃಷ್ಣನಗರದಲ್ಲಿರುವ ಎನ್‌ಟಿಪಿಸಿ ಕಾಲೋನಿಯಲ್ಲಿ ವಾಸವಾಗಿರುವ 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿತ್ತು. ಆದರೆ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದಾಗ ಆಸ್ಪತ್ರೆಗೆ ಕರೆದೊಯ್ಯಲು ಆ ವೇಳೆಯಲ್ಲಿ ಅವರ ಪುತ್ರಿ ಬಿಟ್ಟರೆ ಯಾರೂ ಇರಲಿಲ್ಲ. ಕೆಲ ದಿನಗಳ ಹಿಂದೆಯೇ ಇವರ ಪತ್ನಿ ಕುಟುಂಬವನ್ನು ತೊರೆದು ತನ್ನ ತವರು ಮನೆಗೆ ತೆರಳಿದ್ದರು. ಹೀಗಾಗಿ ಸರಿಯಾದ ಸಮಯಕ್ಕೆ ಸಹಾಯ ಸಿಗದೇ ಮನೆಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಒಂದೇ ವಾರದೊಳಗೆ ಮೂವರು ಬಿಜೆಪಿ ಶಾಸಕರನ್ನು ಕಳೆದುಕೊಂಡ ಉತ್ತರ ಪ್ರದೇಶ
ತನ್ನ ಅಪ್ಪ ಬದುಕಿಲ್ಲ ಎಂಬ ವಿಚಾರ ತಿಳಿಯದ ಬಾಲಕಿ, ರಾತ್ರಿ ತಂದೆಯೊಂದಿಗೇ ಮಲಗಿದ್ದಾಳೆ. ಬೆಳಗ್ಗೆ ಎದ್ದು ಬಿಸ್ಕತ್ತು ತಿಂದು, ಅಪ್ಪನ ಮೊಬೈಲ್‌ನಲ್ಲಿ ಗೇಮ್ ಆಡಿದ್ದಾಳೆ. ತಂದೆಯ ಸ್ನೇಹಿತರೊಬ್ಬರು ಕರೆ ಮಾಡಿದ್ದು, ಅವರು ನಿದ್ದೆ ಮಾಡುತ್ತಿದ್ದಾರೆಂದು ಹೇಳಿದ್ದಾಳೆ. ಆದರೆ ಅನುಮಾನಗೊಂಡ ಅವರು, ವಿಡಿಯೋ ಕರೆ ಮಾಡಿ ಮೊಬೈಲ್ ಕ್ಯಾಮೆರಾವನ್ನು ತಂದೆಯ ಕಡೆಗೆ ತಿರುಗಿಸುವಂತೆ ಆಕೆಗೆ ತಿಳಿಸಿದ್ದಾರೆ. ಆಗ ವಿಚಾರ ಬೆಳಕಿಗೆ ಬಂದಿದೆ.
ಈತ ನೀಡಿದ ಮಾಹಿತಿ ಮೇರೆಗೆ ಸಿಪಿಐ ರಾಜ್ಯ ಸಮಿತಿ ಸದಸ್ಯ ರಣವಿಜಯ್ ಕುಮಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಹರಸಾಹಸ ಮಾಡಿ ಮೃತದೇಹವನ್ನು ಹೊರತಂದು ಅಂತ್ಯಕ್ರಿಯೆಗೆ ಕಳುಹಿಸಿದ್ದಾರೆ. ಬಾಲಕಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರುವವರೆಗೂ ಮನೆ ಮಾಲೀಕರೊಂದಿಗೆ ಇರಿಸಲಾಗಿದೆ.