ಮೀರತ್ (ಉತ್ತರ ಪ್ರದೇಶ): ಕೋವಿಡ್ ರೋಗಿಗೆ ರೆಮ್ಡೆಸಿವಿರ್ ಚುಚ್ಚುಮದ್ದಿನ ಬದಲು ಲವಣಯುಕ್ತ ನೀರನ್ನು ನೀಡಿದ್ದ ಆರೋಪದ ಮೇಲೆ ವೈದ್ಯಕೀಯ ಕಾಲೇಜಿನ ಇಬ್ಬರು ಕೊರೊನಾ ವಾರ್ಡ್ ಬಾಯ್ಸ್ ಸೇರಿದಂತೆ ಎಂಟು ಜನರನ್ನು ಉತ್ತರ ಪ್ರದೇಶದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಧನದಾಹಕ್ಕೆ ಪ್ರಾಣ ಹೋಯ್ತು..
ಆರೋಪಿಗಳು ಆಸ್ಪತ್ರೆಯ ನೌಕರರಾಗಿದ್ದು, ರೋಗಿಗೆ ಔಷಧಿ ಬದಲು ಸಲೈನ್ ನೀರನ್ನು ಇಂಜೆಕ್ಟ್ ಮಾಡಿದ್ದಾರೆ. ಇದೇ ವೇಳೆ ತಮಗೆ ನೀಡಿದ್ದ ರೆಮ್ಡೆಸಿವಿರ್ ಬಾಟಲಿಯನ್ನು 25 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕಾಲೇಜಿನ ಟ್ರಸ್ಟಿ ಅತುಲ್ ಭಟ್ನಾಗರ್ ಮತ್ತು ಅವರ ಪುತ್ರ ಸೇರಿದಂತೆ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಚಿಕಿತ್ಸೆಗೆ ರೈಲ್ವೆ ಕೋಚ್‌ಗಳು ಸಿದ್ಧ: ರೈಲ್ವೆ ಇಲಾಖೆಯಿಂದ ವ್ಯವಸ್ಥೆ
ಪ್ರಕರಣದ ವಿವರ:
ಗಾಜಿಯಾಬಾದ್ ಮೂಲದ ರೋಗಿ ಶೋಭಿತ್ ಜೈನ್ ಅವರನ್ನು ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಆಗ ವೈದ್ಯರು ಇಂಜೆಕ್ಷನ್‌ಗೆ ಸಲಹೆ ನೀಡಿದ್ದಾರೆ. ಕುಟುಂಬ ಸದಸ್ಯರ ಪ್ರಕಾರ, ಅವರು ಆಸ್ಪತ್ರೆಯ ಸಿಬ್ಬಂದಿಗೆ ರೆಮ್ಡೆಸಿವಿರ್ ಬಾಟಲಿಯನ್ನು ನೀಡಿದ್ದರಂತೆ. ಆದರೆ ಸಿಬ್ಬಂದಿ ಔಷಧಿ ಬದಲಿಗೆ ರೋಗಿಗೆ ಸಲೈನ್ ನೀರನ್ನು ಚುಚ್ಚುಮದ್ದು ಎಂದು ಹೇಳಿ ನೀಡಿದ್ದಾರೆ. ಇದರಿಂದ ರೋಗಿಯು ಸಾವನ್ನಪ್ಪಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ವಾರ್ಡ್ ಬಾಯ್ಸ್ ತಪ್ಪೊಪ್ಪಿಕೊಂಡಿದ್ದಾರೆ.
ಉತ್ತರ ಪ್ರದೇಶದ ಕೊರೊನಾ ಅಂಕಿಅಂಶ
ಉತ್ತರ ಪ್ರದೇಶದಲ್ಲಿ ಶನಿವಾರ 38,055 ಹೊಸ ಕೊರೊನಾ ಪ್ರಕರಣಗಳು ಮತ್ತು 223 ಸಾವು ವರದಿಯಾಗಿವೆ.
ತಮಿಳುನಾಡಿನಲ್ಲಿ ರೋಗಿಗಳಿಗೆ ಅವಧಿ ಮೀರಿದ ರೆಮ್ಡೆಸಿವಿರ್ ಪೂರೈಕೆ:
ಇನ್ನೊಂದೆಡೆ, ಚೆನ್ನೈನ ಸರ್ಕಾರಿ ಆಸ್ಪತ್ರೆಯು ತನ್ನ ರೋಗಿಗಳಿಗೆ ಅವಧಿ ಮೀರಿದ ರೆಮ್ಡೆಸಿವಿರ್ ಔಷಧಿಯನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಔಷಧದ ಬಾಟಲಿಯ ಹೊರಭಾಗಕ್ಕೆ ಹೊಸ ಲೇಬಲ್ ಜೋಡಿಸಿ, ಅವಧಿ ಮುಗಿದ ದಿನಾಂಕವನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.