ನವದೆಹಲಿ: ದೇಶಭ್ರಷ್ಟ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ 18,170 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಸ್ವತಃ ಜಾರಿ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ.
ಉದ್ಯಮಿಗಳಿಂದ ಜಪ್ತಿ ಮಾಡಲಾದ ಆಸ್ತಿಯ ಅರ್ಧದಷ್ಟನ್ನು ಅಂದರೆ ಸುಮಾರು 8,441 ಕೋಟಿ ರೂಪಾಯಿಗಳ ಆಸ್ತಿಯನ್ನು ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಒಟ್ಟು 22,585.83 ಕೋಟಿ ರೂಪಾಯಿಗಳನ್ನು ವಂಚಿಸಿದ್ದು, ಇವುಗಳಿಗೆ ಪ್ರತಿಯಾಗಿ ಸುಮಾರು 18,170 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಅಂದ್ರೆ ಶೇಕಡಾ 80ರಷ್ಟನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈಗ ಸದ್ಯಕ್ಕೆ 8,441 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಬ್ಯಾಂಕುಗಳು ಮತ್ತು ಸರ್ಕಾರಕ್ಕೆ ವರ್ಗಾಯಿಸಲಾಗಿದ್ದು, ಕೋರ್ಟ್ ಆದೇಶದಂತೆ ಜೂನ್ 25ರಂದು 800 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಬಂಧುಗಳ ಬಲಿ ಪಡೆದ ಕೋವಿಡ್: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಎಸ್ಬಿಐ ನೇತೃತ್ವದ ಬ್ಯಾಂಕ್ಗಳಿಗೆ ಸುಮಾರು 6,600 ಕೋಟಿ ರೂಪಾಯಿಗಳ ಮೊತ್ತದ ಷೇರುಗಳನ್ನು ವರ್ಗಾವಣೆ ಮಾಡಲಾಗಿದೆ. ಈ ರೀತಿಯ ವರ್ಗಾವಣೆಗೆ ಮುಂಬೈನ ಪಿಎಂಎಲ್ಎ ವಿಶೇಷ ಕೋರ್ಟ್ ಆದೇಶ ನೀಡಿತ್ತು. ಸಾಲ ವಸೂಲಿ ಟ್ರಿಬ್ಯುನಲ್ (ಡೆಟ್ ರಿಕವರಿ ಟ್ರಿಬ್ಯುನಲ್) ವಿಜಯ್ ಮಲ್ಯ ಅವರ ಯುನೈಟೆಡ್ ಬೆವರೇಜಸ್ ಲಿಮಿಟೆಡ್ (ಯುಬಿಎಲ್)ನ 5,800 ಕೋಟಿ ಮೌಲ್ಯದ ಷೇರುಗಳನ್ನು ಹರಾಜು ಮಾಡಿದೆ.