ಚೆನ್ನೈ (ತಮಿಳುನಾಡು): ಜಾರಿ ನಿರ್ದೇಶನಾಲಯ (ಇಡಿ) ಇಂದು (ಮಂಗಳವಾರ) ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಕೊಠಡಿಯಲ್ಲಿ ಶೋಧ ನಡೆಸಿದ್ದು, ತಮಿಳುನಾಡಿನ ರಾಜಕೀಯ ವರ್ಗದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಕೊಯಮತ್ತೂರಿನಲ್ಲಿ ಸೆಂಥಿಲ್ ಬಾಲಾಜಿ ಅವರ ಆಪ್ತರಿಗೆ ಸೇರಿದ ಸ್ಥಳಗಳಲ್ಲಿ ತನಿಖಾಧಿಕಾರಿಗಳು ಬೆಳಿಗ್ಗೆಯಿಂದಲೇ ದಾಖಲೆಗಳ ಶೋಧ ನಡೆಸುತ್ತಿದ್ದಾರೆ.
ಕೆಲವು ವಾರಗಳ ಹಿಂದೆ, ಆದಾಯ ತೆರಿಗೆ ಅಧಿಕಾರಿಗಳು ಸೆಂಥಿಲ್ ಬಾಲಾಜಿಗೆ ನಿಕಟವಾಗಿರುವವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಶೋಧಕಾರ್ಯ ಉದ್ಯೋಗ ಕೊಡಿಸಲು ಹಣ ಪಡೆದಿರುವ ಹಗರಣಕ್ಕೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಸೆಂಥಿಲ್ ಬಾಲಾಜಿ ಒಬ್ಬರು. ಇದೇ ಪ್ರಕರಣದ ತನಿಖೆಯನ್ನು ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಇಡಿಗೆ ಆದೇಶ ನೀಡಿತ್ತು.
ಹೀಗಿರುವಾಗ ರಾಜ್ಯದ ಶಕ್ತಿ ಕೇಂದ್ರವಾಗಿರುವ ಸೆಕ್ರೆಟರಿಯೇಟ್‌ನಲ್ಲಿ ಸಚಿವ ರ ಕೊಠಡಿಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳು ಮಧ್ಯಾಹ್ನ 1.40ರ ಸುಮಾರಿಗೆ ಸೆಕ್ರೆಟರಿಯೇಟ್ ಪ್ರವೇಶಿಸಿದ್ದರು. ಇಡಿ ಮತ್ತು ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಕೂಡ ದಾಳಿಯಲ್ಲಿ ಭಾಗಿಯಾಗಿದ್ದರು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಸಚಿವರ ಸಹಾಯಕರು ಕೊಠಡಿಯಲ್ಲಿದ್ದರು.
ಸೆಂಥಿಲ್ ಬಾಲಾಜಿ ಪ್ರತಿಕ್ರಿಯೆ: ದಾಳಿಯ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಕಾರ್ಯಕ್ರಮಗಳನ್ನು ತರಾತುರಿಯಲ್ಲಿ ಮುಗಿಸಿ ಮನೆಗೆ ಮರಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಕೇಂದ್ರ ಅರೆಸೇನಾ ಪಡೆಗಳ ಬೆಂಗಾವಲು ಕಾರಿನಲ್ಲಿ ಐವರು ಇಡಿ ಅಧಿಕಾರಿಗಳ ತಂಡವು ಬೆಳಿಗ್ಗೆ ಗ್ರೀನ್‌ವೇಸ್ ರಸ್ತೆಯಲ್ಲಿರುವ ಸೆಂಥಿಲ್ ಬಾಲಾಜಿ ಅವರ ಮನೆ, ಬಿಷಪ್ ಗಾರ್ಡನ್ ಪ್ರದೇಶದಲ್ಲಿರುವ ಅವರ ಸಹೋದರನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತು. ನಂತರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸಚಿವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ''ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ದಾಳಿ ಪೂರ್ಣಗೊಂಡ ನಂತರ ಮಾತನಾಡುತ್ತೇನೆ'' ಎಂದು ಹೇಳಿದರು.
ವಿವಿಧೆಡೆ ಇಡಿ ಅಧಿಕಾರಿಗಳ ರೈಡ್: ಇದಲ್ಲದೇ ಇಡಿ ಅಧಿಕಾರಿಗಳು ಬೆಳಿಗ್ಗೆ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಮೊದಲನೆಯದಾಗಿ, ಚೆನ್ನೈನಲ್ಲಿರುವ ಸೆಂಥಿಲ್ ಬಾಲಾಜಿ ಅವರ ನಿವಾಸ, ಅಭಿರಾಮಪುರಂನಲ್ಲಿರುವ ಅವರ ಸಹೋದರ ಅಶೋಕ್ ಅವರ ನಿವಾಸ, ಹಾಗೆಯೇ ಅದೇ ಪ್ರದೇಶದಲ್ಲಿ ಶ್ರೀಪತಿ ಎಂಟರ್‌ಪ್ರೈಸಸ್ ಮಾಲೀಕ ಗೋಕುಲ್ ಅವರ ನಿವಾಸ. ಅಧಿಕಾರಿಗಳು ದಾಳಿ ನಡೆಸಲು ಅಭಿರಾಮಿಪುರಂ ಪ್ರದೇಶದಲ್ಲಿರುವ ಸೆಂಥಿಲ್ ಬಾಲಾಜಿ ಅವರ ಕಿರಿಯ ಸಹೋದರ ಅಶೋಕ್ ಅವರ ಅಪಾರ್ಟ್‌ಮೆಂಟ್‌ಗೆ ಬೆಳಿಗ್ಗೆ 7 ಗಂಟೆಗೆ ತಲುಪಿದಾಗ, ಡಿಎಂಕೆ ಪಕ್ಷದ ಕಾರ್ಯಕರ್ತರು ಅವರನ್ನು ತಡೆದು ಸುಮಾರು 4 ಗಂಟೆಗಳ ಕಾಲ ಅಪಾರ್ಟ್‌ಮೆಂಟ್‌ನ ಕಾರ್ ಪಾರ್ಕಿಂಗ್‌ನಲ್ಲಿ ಕಾಯುವಂತೆ ಮಾಡಿದರು. ಮೇಲಾಗಿ ಅಶೋಕ್ ಅವರ ಮನೆಯ ಬಾಗಿಲು ಹಾಕಿದ್ದರಿಂದ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗೆ ಮಾಹಿತಿ ನೀಡಿ ಬಾಗಿಲು ತೆರೆಯಲಾಯಿತು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ: ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ದಾಳಿ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ''ರಾಜಕೀಯವಾಗಿ ಎದುರಿಸಲಾಗದವರಿಗೆ ಬಿಜೆಪಿಯ ರಾಜಕೀಯ ಬೆದರಿಕೆ ಹಾಕುತ್ತಿದೆ. ಬಿಜೆಪಿಯು ತನ್ನ ತನಿಖಾ ಅಧಿಕಾರದ ಮೂಲಕ ರಾಜಕೀಯ ಶಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಇದಲ್ಲದೆ, ಇದು ಅವರಿಗೆ ತಿಳಿದಿರುವ ಏಕೈಕ ಮಾರ್ಗ ಎಂದು ನಾನು ಈಗಾಗಲೇ ಹೇಳಿದ್ದೇನೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಯುತ್ತಿರುವುದಕ್ಕೆ ಹಲವು ಉದಾಹರಣೆಗಳಿವೆ" ಎಂದರು.
''ಸೆಕ್ರೆಟರಿಯೇಟ್‌ನಲ್ಲಿರುವ ಸಚಿವರ ಕೊಠಡಿಗೆ ತೆರಳಿ ತಪಾಸಣೆ ನಡೆಸುವ ಅಗತ್ಯ ಏನಿದೆ ಎಂಬುದು ತಿಳಿದಿಲ್ಲ'' ಎಂದು ವಾಗ್ದಾಳಿ ನಡೆಸಿದ ಸ್ಟಾಲಿನ್, ರಾಜ್ಯದ ಮೇಲೆ ದಾಳಿ ನಡೆಸುತ್ತೇವೆ ಎಂದು ಬಿಜೆಪಿಯವರು ತೋರಿಸಲು ಬಯಸುತ್ತಾರೋ ಅಂತ ಕಾಣಿಸುತ್ತದೆ. ರಾಜಕೀಯವಾಗಿ ಬೆದರಿಕೆ ಹಾಕುವ ಉದ್ದೇಶದಿಂದ ಕೇಂದ್ರ ಸಂಸ್ಥೆಯನ್ನು ಈ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಗರಂ ಆದರು.
ಕೇಂದ್ರೀಯ ಸಂಸ್ಥೆ ಇಡಿ ಸೆಕ್ರೆಟರಿಯೇಟ್‌ನಲ್ಲಿ ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿ ಎಂಬುದನ್ನು ಗಮನಿಸಬಹುದು. 2016ರಲ್ಲಿ ಮರಳು ಗಣಿಗಾರಿಕೆ ದೊರೆ ಸೇಕರ್ ರೆಡ್ಡಿ ಅವರ ವಿಚಾರಣೆ ವೇಳೆ ದೊರೆತ ಮಾಹಿತಿ ಮೇರೆಗೆ ಅಂದಿನ ಮುಖ್ಯ ಕಾರ್ಯದರ್ಶಿ ಪಿ.ರಾಮಮೋಹನ್ ರಾವ್ ಅವರ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: Cyclone Biparjoy : ಸಮುದ್ರದಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್- ವಿಡಿಯೋ