ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ನ(ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ಸಿಎಂ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಆಗಸ್ಟ್ 29ರಂದು ಮೇಯೊ ರಸ್ತೆಯಲ್ಲಿ ಟಿಎಂಸಿ ಸಂಸ್ಥಾಪನಾ ದಿನಾಚರಣೆ ವೇದಿಕೆಯಲ್ಲಿ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ಸೇಡಿನ ರಾಜಕಾರಣ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಾದ ಮರುದಿನವೇ ಅವರಿಗೆ ಸಮನ್ಸ್ ಬಂದಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮಾತನಾಡಿದ್ದ ಮಮತಾ ಬ್ಯಾನರ್ಜಿ ಕೂಡ ಬಿಜೆಪಿ ಟೀಕಾಪ್ರಹಾರ ನಡೆಸಿದ್ದರು. ಮುಂದಿನ ದಿನಗಳಲ್ಲಿ ಸೋದರಳಿಯ ಅಭಿಷೇಕ್ ಹಾಗೂ ಇತರೆ ಹಿರಿಯ ಮುಖಂಡರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಶಂಕಿಸಿದ್ದರು. ಇದೀಗ ಈ ಬೆಳವಣಿಗೆ ನಡೆದಿದೆ. ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಜುಲೈ 23ರಂದು ಇಡಿ ಬಂಧಿಸಿದೆ. ನಂತರ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: ಚುನಾಯಿತ ಸರ್ಕಾರಗಳನ್ನು ಉರುಳಿಸಲು ಹಣ ಎಲ್ಲಿಂದ ಬರ್ತಿದೆ ಎಂದು ಬಿಜೆಪಿ ಹೇಳಲಿ: ಮಮತಾ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ ಮೇಲಿರುವ ಆರೋಪವೇನು?: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಅಭಿಷೇಕ್ ಮೇಲೆ ಗಂಭೀರ ಆರೋಪವಿದೆ. ಈಗಾಗಲೇ ದೆಹಲಿಯಲ್ಲಿ ಇಡಿ ಕಚೇರಿಯಲ್ಲಿಯೂ ಅವರು ವಿಚಾರಣೆ ಎದುರಿಸಿದ್ದಾರೆ. ಮಾರ್ಚ್ 21ರಂದು ಸುಮಾರು ತಾಸುಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ನಿನ್ನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ: ನಿನ್ನೆಯಷ್ಟೇ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕರುಗಳ ಮೇಲೆ ಆರೋಪ ಮಾಡುತ್ತಿರುವ ಕೇಂದ್ರ ಬಿಜೆಪಿ ನಾಯಕರು ತಾಕತ್ ಇದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲೆಸೆದಿದ್ದರು. ಅಷ್ಟೇ ಅಲ್ಲ, ಬಿಜೆಪಿ ಕುತಂತ್ರದಿಂದ ಸಂಪಾದಿಸಿದ ಹಣದಿಂದ ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.