ತಿರುವನಂತಪುರಂ (ಕೇರಳ): ಪುನರ್ಜನಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇರಳ ಪ್ರತಿಪಕ್ಷ ನಾಯಕ ವಿ. ಡಿ ಸತೀಶನ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆ ಆರಂಭಿಸಿದೆ. ಕೇರಳದಲ್ಲಿ 2018ರಲ್ಲಿ ಸಂಭವಿಸಿದ ಅತಿವೃಷ್ಟಿಯ ನಂತರ ಇಲ್ಲಿನ ಪರವೂರು ಕ್ಷೇತ್ರದಲ್ಲಿ ಪುನರ್ಜನಿ ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿತ್ತು. ಈ ಸಂಬಂಧ ಇಡಿ ತನಿಖೆಯನ್ನು ಆರಂಭಿಸಿದೆ.
ಪುನರ್ಜನಿ ಯೋಜನೆ ಅಕ್ರಮ ಸಂಬಂಧ ಈಗಾಗಲೇ ರಾಜ್ಯ ವಿಜಿಲೆನ್ಸ್ ತನಿಖೆ ನಡೆಸುತ್ತಿದೆ. ಅಲ್ಲದೇ ರಾಜ್ಯ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಸತೀಶನ್ ವಿರುದ್ಧ ಈ ಹಿಂದೆಯೇ ಎಫ್ಐಆರ್ ದಾಖಲಿಸಿತ್ತು. ವಿಜಿಲೆನ್ಸ್ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇಡಿಯು ಪ್ರಕರಣದ ತನಿಖೆಗೆ ಮುಂದಾಗಿದೆ. ಕೊಚ್ಚಿ ಜಾರಿ ನಿರ್ದೇಶನಾಲಯ ಉಪನಿರ್ದೇಶಕ ಪ್ರಶಾಂತ್ ಕುಮಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇಡಿ ಪ್ರಾಥಮಿಕ ತನಿಖಾ ವರದಿಯನ್ನು ಸಿದ್ಧಪಡಿಸಿದ ನಂತರ ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯಿಂದ ಅನುಮೋದನೆ ಪಡೆಯಲಿದೆ. ಕೇಂದ್ರ ಕಚೇರಿಯಿಂದ ಅನುಮತಿ ದೊರೆತರೆ ಈ ಸಂಬಂಧ ಪ್ರಕರಣ ದಾಖಲಾಗಲಿದೆ.
ಪರವೂರು ಕ್ಷೇತ್ರದಲ್ಲಿ ಪುನರ್ಜನಿ ಯೋಜನೆ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರಿನ ಪ್ರಕಾರ ಪುನರ್ಜನಿ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ವಿ.ಡಿ.ಸತೀಶನ್ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪರವೂರು ಕ್ಷೇತ್ರದಲ್ಲಿ ಅನುಷ್ಠಾನಗೊಂಡಿರುವ ಯೋಜನೆಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ.
ಇದರ ಜೊತೆಗೆ ವಿ.ಡಿ ಸತೀಶನ್ ಅವರ ವಿದೇಶ ಪ್ರವಾಸ, ದೇಣಿಗೆ ಸಂಗ್ರಹ ಮತ್ತು ಪುನರ್ಜನಿ ಯೋಜನೆಗೆ ಹಣ ಬಳಕೆ ಮಾಡಲಾದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ಎಫ್‌ಸಿಆರ್‌ಎ ಮತ್ತು ಫೆಮಾ ಕಾಯ್ದೆಗಳ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಈ ಯೋಜನೆಯನ್ನು ಜಿಲ್ಲಾಡಳಿತ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಅರಿವಿನ ಮೇರೆಗೆ ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆಯೂ ವಿಜಿಲೆನ್ಸ್ ತನಿಖೆ ನಡೆಸುತ್ತಿದೆ. ತನಿಖೆ ಬಗ್ಗೆ ವಿಪಕ್ಷನಾಯಕ ವಿ ಡಿ ಸತೀಶನ್, ವಿಜಿಲೆನ್ಸ್ ತನಿಖೆಗೆ ನನ್ನ ವಿರೋಧವಿಲ್ಲ. ನಾನು ತನಿಖೆಗೆ ಸಹಕರಿಸುತ್ತೇನೆ. ಪುನರ್ಜನಿ ಯೋಜನೆ ಕುರಿತು ವಿಜಿಲೆನ್ಸ್ ತನಿಖೆ ನಡೆಸಲಿ ಎಂದು ಹೇಳಿದ್ದರು. ಪುನರ್ಜನಿ ಯೋಜನೆ ಸಂಬಂಧ ಸಲ್ಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿಗಳೇ ಈ ಪ್ರಕರಣವನ್ನು ವಜಾಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಕೆ-ಫೋನ್ ಯೋಜನೆ, ಕೆ-ರೈಲ್ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬವೇ ಮುಖ್ಯ ಫಲಾನುಭವಿಗಳು. ಈ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಈ ಎಲ್ಲಾ ಭ್ರಷ್ಟಾಚಾರ ಆರೋಪಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಿಪಿಎಂ ಮತ್ತು ಕೇರಳ ಸರ್ಕಾರ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಸತೀಶನ್ ಆರೋಪಿಸಿದ್ದಾರೆ.
ಇದನ್ನೂ ಓದಿ :UCC row: 40% ಅಲ್ಪಸಂಖ್ಯಾತರ ಕಲ್ಯಾಣ ಬಜೆಟ್ ಯಾಕೆ ಕಡಿತಗೊಳಿಸಲಾಗಿದೆ.. ಮೋದಿಗೆ ಓವೈಸಿ ಪ್ರಶ್ನೆ