ರಾಯಪುರ (ಛತ್ತೀಸ್ಘಡ): ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ರಾಯಪುರದ ವಿಶೇಷ ನ್ಯಾಯಾಲಯಕ್ಕೆ ಎರಡನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ದುಬೈನಲ್ಲಿರುವ ಮಹಾದೇವ್ ಆ್ಯಪ್ ಪ್ರಮುಖ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರನ್ನು ಹಸ್ತಾಂತರಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ದಾಖಲೆಯನ್ನು ಯುಎಇಯೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಆರೋಪಿಗಳಾದ ರವಿ ಉಪ್ಪಲ್ ಮತ್ತು ಸೌರಭ್ ಚಂದ್ರಕರ್ ವಿರುದ್ಧ ಇಡಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆ್ಯಪ್ನ ಪ್ರಮುಖ ಪ್ರವರ್ತಕರಾಗಿರುವ ಈ ಇಬ್ಬರ ಗಡಿಪಾರು ಅಥವಾ ಹಸ್ತಾಂತರ ಕೋರಲು ಫೆಡರಲ್ ಏಜೆನ್ಸಿಯು ದುಬೈ ಅಧಿಕಾರಿಗಳೊಂದಿಗೆ ಎರಡನೇ ಪ್ರಾಸಿಕ್ಯೂಷನ್ ದೂರು ನೀಡಲು ಮುಂದಾಗಿದೆ. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ರವಿ ಉಪ್ಪಲ್ ಮತ್ತು ಸೌರಭ್ ಚಂದ್ರಕರ್ ಅವರನ್ನು ಇತ್ತೀಚೆಗೆ ದುಬೈನಲ್ಲಿ ಬಂಧಿಸಲಾಗಿದೆ. ಅಲ್ಲದೆ ವಿವಿಧ ಚಟುವಟಿಕೆಗಳಿಂದ ಈ ಇಬ್ಬರನ್ನು ನಿಷೇಧಿಸಲಾಗಿದೆ.
ಜನವರಿ 10 ರಂದು ಮುಂದಿನ ವಿಚಾರಣೆ: ಕಳೆದ ವರ್ಷ ಅಕ್ಟೋಬರ್ 21 ರಂದು ಇಡಿ ಮೊದಲ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದರಲ್ಲಿ 14 ಜನರ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು. ಇದೀಗ ಜ.1 ರಂದು ಸಲ್ಲಿಕೆಯಾಗಿರುವ ಸುಮಾರು 1800 ಪುಟಗಳ ಎರಡನೇ ಚಾರ್ಜ್ ಶೀಟ್ನಲ್ಲಿ 5 ಜನರ ಹೆಸರು ಉಲ್ಲೇಖಸಲಾಗಿದೆ. ಸೌರಭ್ ಚಂದ್ರಕರ್, ರವಿ ಉಪ್ಪಲ್, ಅಸೀಮ್ ದಾಸ್, ಪೊಲೀಸ್ ಪೇದೆ ಭೀಮ್ ಸಿಂಗ್ ಯಾದವ್, ಆ್ಯಪ್‌ಗೆ ಸಂಬಂಧಿಸಿದ ಮತ್ತೊಬ್ಬ ಆರೋಪಿ ಶುಭಂ ಸೋನಿ ಅವರ ಹೆಸರುಗಳು ಈ ಚಾರ್ಜ್‌ಶೀಟ್‌ನಲ್ಲಿವೆ. ಜನವರಿ 10 ರಂದು ನ್ಯಾಯಾಲಯವು ಇದರ ವಿಚಾರಣೆ ನಡೆಸಲಿದೆ ಎಂದು ಇಡಿ ವಕೀಲ ಸೌರಭ್ ಪಾಂಡೆ ಹೇಳಿದ್ದಾರೆ.
ಕಾನ್‌ಸ್ಟೆಬಲ್ ಭೀಮ್ ಸಿಂಗ್ ಪತ್ನಿಗೆ ಸಮನ್ಸ್: ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ಕಾನ್‌ಸ್ಟೆಬಲ್ ಭೀಮ್ ಸಿಂಗ್ ಯಾದವ್ ಅವರ ಪತ್ನಿ ಸೀಮಾ ಯಾದವ್ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಸೀಮಾ ಯಾದವ್ ಬ್ಯಾಂಕ್ ಖಾತೆಯಿಂದ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯವು ಮಾಹಿತಿ ಸಂಗ್ರಹಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ, ಡಿಎಸ್‌ಪಿ ಜೋಗಿಂದರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲು