ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಖಾಸಗಿ ವಿಮಾನಯಾನ ಕಂಪನಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಶುಕ್ರವಾರ ತಡರಾತ್ರಿ ಬಂಧಿಸಿದೆ. ಕೆನರಾ ಬ್ಯಾಂಕ್ನಿಂದ 538 ಕೋಟಿ ರೂ. ಸಾಲ ಪಡೆದು ಅದನ್ನು ಬೇರೆಡೆ ವರ್ಗಾವಣೆ ಮಾಡಿದ ಪ್ರಕರಣದಡಿ ಕೇಂದ್ರೀಯ ಏಜೆನ್ಸಿಯ ಕಚೇರಿಯಲ್ಲಿ ಸುದೀರ್ಘ ವಿಚಾರಣೆ ನಡೆಸಲಾಗಿತ್ತು. ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. 74 ವರ್ಷ ವಯಸ್ಸಿನ ಗೋಯಲ್ ಅವರನ್ನು ಶನಿವಾರ ಮುಂಬೈನ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜೆಟ್ ಏರ್‌ವೇಸ್, ನರೇಶ್ ಗೋಯಲ್, ಅವರ ಪತ್ನಿ ಅನಿತಾ ಮತ್ತು ಕೆಲವು ಮಾಜಿ ಕಂಪನಿ ಕಾರ್ಯನಿರ್ವಾಹಕರ ವಿರುದ್ಧ ಕೇಂದ್ರೀಯ ತನಿಖಾ ದಳ ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು. ಇದನ್ನು ಆಧರಿಸಿ ಇ.ಡಿ. ಗೋಯಲ್ ಅವರನ್ನು ವಶಕ್ಕೆ ಪಡೆದಿದೆ.
ನರೇಶ್ ಗೋಯಲ್ ಜೆಟ್ ಏರ್ವೇಸ್ಗಾಗಿ ಕೆನರಾ ಬ್ಯಾಂಕ್ನಿಂದ 848.86 ಕೋಟಿ ರೂ. ಸಾಲ ಪಡೆದಿದ್ದರು. ಅದರಲ್ಲಿ 538.62 ಕೋಟಿ ಮರುಪಾವತಿ ಮಾಡಲಿಲ್ಲ. ಈ ಹಣವನ್ನು ನರೇಶ್ ಬೇರೆ ಕಡೆ ವರ್ಗಾವಣೆ ಮಾಡಿದ್ದರು ಎಂಬ ಆರೋಪ ಬಂದಿತ್ತು. ಮರು ಪಾವತಿ ಮಾಡದೇ ಸಾಲ ಬಾಕಿ ಮಾಡಿದ್ದರಿಂದ 2021 ರ ಜುಲೈ 29 ರಂದು ಜೆಟ್ ಖಾತೆಯನ್ನು ವಂಚನೆ ಎಂದು ಘೋಷಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.
ನರೇಶ್ ಗೋಯಲ್ ಅವರ ಹಿಂದಿನ ಪ್ರಕರಣ :- ಮಾರ್ಚ್ 4 2020 ರಲ್ಲಿ ಗೋಯಲ್ ಮನೆ ಮೇಲೆ ಇ.ಡಿ. ದಾಳಿ: ಅಕ್ರಮ ಹಣ ವರ್ಗಾವಣೆ ಹಣಕ್ಕೆ ಸಂಬಂಧಿಸಿ 2020ರಲ್ಲಿ ಜಾರಿ ನಿದೇಶನಾಲಯದ ಅಧಿಕಾರಿಗಳು ನರೇಶ್ ಗೋಯಲ್ ಅವರ ನಿವಾಸದ ಮೇಲೆ ದಾಳಿ ಮಾಡಿತ್ತು. ಇನ್ನು 2018ರ ಅಕ್ಟೋಬರ್ನಲ್ಲಿ ಜೆಟ್ ಏರ್‌ವೇಸ್ ತನ್ನ ವಿಮಾನ ಕಾರ್ಯಾಚರಣೆ ರದ್ದುಗೊಳಿಸಿದ ನಂತರ 46 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಎಂದು ಅಕ್ಬರ್ ಟ್ರಾವೆಲ್ಸ್ ಎಂಬ ಸಂಸ್ಥೆ ಆರೋಪಿಸಿತ್ತು.
ಜೆಟ್ ಏರ್‌ವೇಸ್ ವಿರುದ್ಧ ಅಕ್ಬರ್ ಟ್ರಾವೆಲ್ಸ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ರಾಜೇಂದ್ರನ್ ನೆರುಪರಂಬಿಲ್ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಮುಂಬೈ ಪೊಲೀಸರು ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಪೋರ್ಜರಿ ಆರೋಪದಡಿ ಅಂದು ಪ್ರಕರಣ ದಾಖಲಿಸಿದ್ದರು.
ಆದರೆ, ನಂತರದಲ್ಲಿ ಪೊಲೀಸರು 2020ರ ಮಾರ್ಚ್ನಲ್ಲಿ ಈ ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು. ಈ ಕ್ರಿಮಿನಲ್ ದೂರಿನಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಮುಂಬೈ ಪೊಲೀಸರು ತಮ್ಮ ಅಂತಿಮ ವರದಿಯಲ್ಲಿ ತಿಳಿಸಿದ್ದರು. ಈ ವರದಿಯನ್ನು ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಆದರೆ ಈಗ ಮತ್ತೆ ನರೇಶ್ ಗೋಯಲ್ಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಜೆಟ್ ಏರ್‌ವೇಸ್ ನರೇಶ್ ಗೋಯಲ್ ದಂಪತಿಯ ಇಡಿ ಕೇಸ್ ರದ್ದು