ನವದೆಹಲಿ: ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ಕಂಪನಿಯ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇಡಿ) ಲಾವಾ ಇಂಟರ್‌ನ್ಯಾಶನಲ್ ಮೊಬೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ನಾಲ್ವರನ್ನು ಮಂಗಳವಾರ ಬಂಧಿಸಿತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಈ ನಾಲ್ವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಆರೋಪಿಗಳನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದ್ದು, ಹೆಚ್ಚಿನ ವಿಚಾರಣೆಗಾಗಿ ಇಡಿ ತನ್ನ ಕಸ್ಟಡಿಗೆ ಕೋರಲಿದೆ ಎಂದು ಮೂಲಗಳು ತಿಳಿಸಿವೆ.
ಯಾರೆಲ್ಲಾ ಬಂಧನ?: ಲಾವಾ ಇಂಟರ್‌ನ್ಯಾಶನಲ್ ಮೊಬೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಲೆಕ್ಕ ಪತ್ರಗಾರ (ಚಾರ್ಟರ್ಡ್ ಅಕೌಂಟೆಂಟ್) ಚೀನಾದ ಪ್ರಜೆ, ಇನ್ನೊಬ್ಬ ವ್ಯಕ್ತಿಯನ್ನು ಇಡಿ ಬಂಧಿಸಿದೆ. ಇವರ ಮೇಲೆ ಚೀನಾಕ್ಕೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಗಂಭೀರ ಆರೋಪವಿದೆ.
ಜಾರಿ ನಿರ್ದೇಶನಾಲಯವು ಕಳೆದ ವರ್ಷದ ಜುಲೈನಲ್ಲಿ ಚೀನಾ ಕಂಪನಿಯಾದ ವಿವೋ ಮತ್ತು ಅದರ ಸಂಬಂಧಿತ ವ್ಯಕ್ತಿಗಳ ಮೇಲೆ ದಾಳಿ ನಡೆಸಿತ್ತು. ಚೀನಾದ ಪ್ರಜೆಗಳು ಮತ್ತು ಅನೇಕ ಭಾರತೀಯ ಕಂಪನಿಗಳನ್ನು ಒಳಗೊಂಡು ತೆರಿಗೆ ವಂಚಿಸಿ, ಹಣ ವರ್ಗಾವಣೆ ದಂಧೆ ನಡೆಸುತ್ತಿರುವುದನ್ನು ಇಡಿ ಭೇದಿಸಿದ್ದಾಗಿ ಹೇಳಿದೆ. ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಯನ್ನು ತಪ್ಪಿಸುವ ಸಲುವಾಗಿ ವಿವೋ ಕಾನೂನುಬಾಹಿರವಾಗಿ 62,476 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಇಡಿ ಆಪಾದಿಸಿದೆ.
ಈ ಹಿಂದಿನ ಬಂಧನ ಕ್ರಮ: ತೆರಿಗೆ ವಂಚನೆ ಆರೋಪ ಪ್ರಕರಣದ ಸಂಬಂಧ ಕಳೆದ ವರ್ಷ ನಡೆದ ದಾಳಿಯಲ್ಲಿ ವಿವೋ ಕಂಪನಿಯ ರಾಜಸ್ಥಾನದ ಹಣಕಾಸು ಮುಖ್ಯಸ್ಥ ಕ್ವಾನ್ ಲಿ ಎಂಬವರನ್ನು ಇಡಿ ಬಂಧಿಸಿತ್ತು. ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಜೈಪುರದ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ಕೈಗೆ ಕ್ವಾನ್ ಲಿ ಸಿಕ್ಕಿಬಿದ್ದಿದ್ದರು.
ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಬೇಕಾಗಿದ್ದ ಈತ ದೇಶದಿಂದ ತಪ್ಪಿಸಿಕೊಳ್ಳಲು ಜೈಪುರದಿಂದ ಏರ್ಏಷ್ಯಾ ವಿಮಾನದಲ್ಲಿ ಬ್ಯಾಂಕಾಕ್‌ಗೆ ಹಾರಲು ಮುಂದಾಗಿದ್ದ. ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ದಾಳಿ ನಡೆದ ಕ್ವಾನ್ ಲಿಯನ್ನು ಬಂಧಿಸಿದ್ದರು. ಈಗಾಗಲೇ ವಿವೋ ಕಂಪನಿಯ ಹಲವು ಅಧಿಕಾರಿಗಳು ದೇಶ ತೊರೆದಿದ್ದಾರೆ.
ತನಿಖಾ ಸಂಸ್ಥೆಯು ವಿವೋ ಮೊಬೈಲ್ಗೆ ಸಂಬಂಧಿಸಿದ ದೇಶದ ವಿವಿಧೆಡೆಯ 23 ಘಟಕಗಳ ಮೇಲೆ ದಾಳಿ ಮಾಡಿತ್ತು. 119 ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 465 ಕೋಟಿ ರೂಪಾಯಿ ಮತ್ತು 2 ಕೆ.ಜಿ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಇಡಿ ದಾಳಿ: ಚೀನಾದ ವಿವೋ ಕಂಪನಿಯ ನಿರ್ದೇಶಕರು ಭಾರತದಿಂದ ಪಲಾಯನ