ನವದೆಹಲಿ: ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಕಾಲೇಜುಗಳ ಹಂಚಿಕೆ ನಡೆಯುತ್ತಿರುವುದರಿಂದ ನಿಯಮಗಳ ಬದಲಾವಣೆ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಮುಂದಿನ ಶೈಕ್ಷಣಿಕ ವರ್ಷದಿಂದ ಇಡಬ್ಲ್ಯೂಎಸ್(ಆರ್ಥಿಕವಾಗಿ ದುರ್ಬಲ ವರ್ಗ) ನಿಯಮಗಳ ಪರಿಷ್ಕರಣೆ ಅನ್ವಯಿಸಬಹುದು ಎಂದು ಹೇಳಿದೆ.
ಪರಿಷ್ಕೃತ ಇಡಬ್ಲ್ಯೂಎಸ್ ಮಾನದಂಡವು ವಿವಾದಾತ್ಮಕ 8 ಲಕ್ಷ ವಾರ್ಷಿಕ ಆದಾಯದ ಮಿತಿ ಉಳಿಸಿಕೊಂಡಿದೆ. ಆದರೆ, ಈ ಆದಾಯವನ್ನು ಲೆಕ್ಕಿಸದೆ ಐದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬಗಳನ್ನು ಇದರಿಂದ ಹೊರಗಿಟ್ಟಿದೆ.
ಒಬಿಸಿಗಳಲ್ಲಿ 'ಕೆನೆಪದರ'ವನ್ನು ನಿರ್ಧರಿಸಲು ಬಳಸಲಾಗುವ ಅದೇ ಮಾನದಂಡದಲ್ಲಿ ಸಂಭಾವ್ಯ ಆರ್ಥಿಕ ದುರ್ಬಲ ವರ್ಗದ ಫಲಾನುಭವಿಗಳನ್ನು ಗುರುತಿಸಲು 8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯದ ಮಿತಿ ಏಕೆ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ನವೆಂಬರ್‌ನಲ್ಲಿ ನಡೆದ ಕೊನೆಯ ವಿಚಾರಣೆಯಲ್ಲಿ, ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಸ್ತುತ ಆದಾಯದ ಮಾನದಂಡಗಳನ್ನು ಮರುಪರಿಶೀಲಿಸಲಾಗುವುದು ಹಾಗೂ ನಾಲ್ಕು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
'ಸಾಮಾಜಿಕ-ಆರ್ಥಿಕ ದತ್ತಾಂಶ ಹೊಂದಿರಬೇಕು'
8 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯದ ಮಾನದಂಡವು ಸಂವಿಧಾನದ 14, 15 ಮತ್ತು 16 ನೇ ವಿಧಿಗಳಿಗೆ ಅನುಗುಣವಾಗಿದೆ ಎಂದು ಸರ್ಕಾರ ಈ ಹಿಂದೆ ವಾದಿಸಿತ್ತು. ಆದರೆ ಇದು ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಒಪ್ಪಿಗೆಯಾಗಲಿಲ್ಲ.
ಭಾರತದಾದ್ಯಂತ ಮಾನದಂಡಗಳನ್ನು ಅನ್ವಯಿಸುವ ಬಗೆಯನ್ನು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಒಂದು ಸಣ್ಣ ಪಟ್ಟಣ/ಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಗಳಿಕೆಯನ್ನು ಮೆಟ್ರೋ ನಗರದಲ್ಲಿ ಅದೇ ರೀತಿ ಗಳಿಸುವವರಿಗೆ ಹೇಗೆ ಸಮೀಕರಿಸಬಹುದು? ಎಂದು ಪ್ರಶ್ನಿಸಿದೆ.
ಇಡಬ್ಲ್ಯೂಎಸ್ ಕೋಟಾ ಸಮಸ್ಯೆಯು ನೀಟ್ ಪ್ರವೇಶಾತಿಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಸ್ಥಾನಿಕ ವೈದ್ಯರು ಕೇಂದ್ರ ಸರ್ಕಾರದ ವಿಳಂಬ ನೀತಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಈ ಬಾರಿ 12ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ ಜಾರ್ಖಂಡ್ ಶಿಕ್ಷಣ ಸಚಿವ!