ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮತ್ತು ಸುಳ್ಳು ಆರೋಪ ಮಾಡಿರುವ ಕುರಿತಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೇಂದ್ರ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಈ ಇಬ್ಬರು ನಾಯಕರು ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರು ದೂರು ನೀಡಿದ್ದರು. ನವೆಂಬರ್ 16ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಇಬ್ಬರಿಗೂ ಆಯೋಗ ಸೂಚಿಸಿದೆ.
ನವೆಂಬರ್ 10ರಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಸಂಬಂಧ ದೂರು ಸಲ್ಲಿಸಲಾಗಿದೆ. ಆಮ್ ಆದ್ಮಿ ಪಕ್ಷ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ವಿರುದ್ಧ ಮಾಡಿರುವ ಪೋಸ್ಟ್ ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ಹೇಳಿತ್ತು. ಈ ಸಂಬಂಧ ಸೂಕ್ತ ಕ್ರಮಕ್ಕೆ ಆಯೋಗವನ್ನು ಒತ್ತಾಯಿಸಿತ್ತು.
ಆಮ್ ಆದ್ಮಿ ಪಕ್ಷವು ಕಳೆದ ಬುಧವಾರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಮೋದಿ ಅವರನ್ನೊಳಗೊಂಡ ವಿಡಿಯೋ ಪೋಸ್ಟ್ ಮಾಡಿತ್ತು. ಇದಾದ ಮರುದಿನ ಅದಾನಿ ಮತ್ತು ಮೋದಿ ಅವರ ಫೋಟೋ ಪೋಸ್ಟ್ ಮಾಡಿ, ಪ್ರಧಾನಿ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು, ಜನರಿಗಾಗಿ ಅಲ್ಲ ಎಂದು ಬರೆಯಲಾಗಿತ್ತು.
ಚುನಾವಣಾ ಆಯೋಗವು ನೀಡಿರುವ ನೋಟಿಸ್ನಲ್ಲಿ, ಪ್ರಧಾನಿ ಮೋದಿ ವಿರುದ್ಧ ಮಾಡಲಾದ ಅವಹೇಳನಕಾರಿ ಪೋಸ್ಟ್ ಸದ್ಯ ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಯಿಂದಲೇ ಬಂದಿದೆ. ಯಾವುದೇ ಆರೋಪಗಳನ್ನು ಮಾಡುವುದಕ್ಕೂ ಮುನ್ನ ರಾಷ್ಟ್ರೀಯ ಪಕ್ಷವಾಗಿ ಸತ್ಯಾಸತ್ಯತೆಗಳನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದೆ. ನಿಗದಿತ ಸಮಯದಲ್ಲಿ ಶೋಕಾಸ್ ನೋಟಿಸ್ಗೆ ಉತ್ತರ ನೀಡದೇ ಇದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಂದು ಆಯೋಗ ತಿಳಿಸಿದೆ. ಆಮ್ ಆದ್ಮಿ ವಿರುದ್ಧ ಬಿಜೆಪಿ ಆಯೋಗದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯಸಭೆ ಸದಸ್ಯ ಓಂ ಪಾಠಕ್ ಅವರು ದೂರು ಸಲ್ಲಿಸಿದರು.
ಪ್ರಿಯಾಂಕಾಗೆ ಶೋಕಾಸ್ ನೋಟಿಸ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧವೂ ದೂರು ದಾಖಲಾಗಿದೆ. ಬಿಜೆಪಿ ಆಯೋಗಕ್ಕೆ ನೀಡಿದ ದೂರಿನ ಪ್ರಕಾರ, ಪ್ರಿಯಾಂಕಾ ಗಾಂಧಿ ಅವರು ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಮೋದಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರು ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಇವುಗಳನ್ನು ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇವರ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ದೂರಿನಲ್ಲಿ ತಿಳಿಸಿದೆ. ಈ ಸಂಬಂಧ ಚುನಾವಣಾ ಆಯೋಗ ಶೋಕಾಸ್ ನೊಟೀಸ್ ಜಾರಿ ಮಾಡಿದ್ದು, ನವೆಂಬರ್ 16ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗವು ಪ್ರಿಯಾಂಕಾ ಅವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ನನ್ನ ಜಾತಿ ಮುಚ್ಚಿಡಲು ಬಯಸುವುದಿಲ್ಲ, ಅದನ್ನು ಬಳಸಿ ರಾಜಕೀಯ ಮಾಡಿಲ್ಲ: ಶರದ್ ಪವಾರ್