ಕಾಸರಗೋಡು (ಕೇರಳ): ಕೇರಳದ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ರಾಜ್ಯದ ಯಾವುದೇ ಹುದ್ದೆಯನ್ನು ಅಲಂಕರಿಸಲು ಮೆಟ್ರೋ ಮ್ಯಾನ್ ಖ್ಯಾತಿಯ ಶ್ರೀಧರನ್ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು.
ತಮಿಳುನಾಡು, ಪಶ್ಚಿಮ ಬಂಗಾಳದ ಜೊತೆಗೆ ಈ ವರ್ಷ ಕೇರಳದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದಿನಿಂದ ವಿಜಯ ಯಾತ್ರೆ ರ್ಯಾಲಿ ನಡೆಸುತ್ತಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರ್ಯಾಲಿಗೆ ಚಾಲನೆ ನೀಡಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಧರನ್ ಬಿಜೆಪಿ ಸೇರ್ಪಡೆಗೊಂಡಿದ್ದು, ಇದು ಯುಡಿಎಫ್ ಮತ್ತು ಎಲ್ಡಿಎಫ್ ಮೈತ್ರಿ ಪಕ್ಷಗಳ ಅಭಿವೃದ್ಧಿ ವಿರೋಧಿ ನಿಲುವಿನಿಂದ ಜನ ಬೇಸರಗೊಂಡಿರುವುದನ್ನು ಪ್ರತಿನಿಧಿಸುತ್ತದೆ ಎಂದರು.
ಶ್ರೀಧರನ್ ಅವರು ಯುಡಿಎಫ್ ಮತ್ತು ಎಲ್ಡಿಎಫ್ ಎರಡೂ ಸರ್ಕಾರಗಳ ಆಡಳಿತ ನೀತಿಗಳಿಂದ ಬೇಸರಗೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆ ಸೇರಿದಂತೆ ರಾಜ್ಯದ ಯಾವುದೇ ಹುದ್ದೆಯನ್ನು ಅಲಂಕರಿಸಲು ಅರ್ಹರಾಗಿದ್ದಾರೆ. ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿದೆ. ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳ ಮುಖ್ಯಮಂತ್ರಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಓದಿ: ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ: ಮೀನುಗಾರರ ಭೇಟಿ, ಮಾತುಕತೆ
ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರ ನೇತೃತ್ವದಲ್ಲಿ ಇಂದು ಕಾಸರಗೋಡಿನಲ್ಲಿ ನಡೆಯಲಿರುವ ಬಿಜೆಪಿ ವಿಜಯ ಯಾತ್ರೆಯಲ್ಲಿ ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕರು ಕೇರಳಕ್ಕೆ ಭೇಟಿ ನೀಡಲಿದ್ದಾರೆ.
ಮಾರ್ಚ್ 7 ರಂದು ತಿರುವನಂತಪುರದಲ್ಲಿ ನಡೆಯಲಿರುವ ರ್ಯಾಲಿಯ ಮುಕ್ತಾಯ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರುತ್ತಾರೆ.