ಮುಂಬೈ(ಮಹಾರಾಷ್ಟ್ರ): ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಈಗಾಗಲೇ ಜಾಮೀನು ಪಡೆದು ಹೊರಬಂದಿದ್ದು, ಇಂದು ಮುನ್ಮುನ್ ಧಮೇಚಾ ಜೈಲಿನಿಂದ ಬಿಡುಗಡೆಯಾದರು.
ಕಳೆದ ಶುಕ್ರವಾರ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಹಾಗು ಮುನ್ಮುಮ್ ಧಮೇಚಾಗೆ ಜಾಮೀನು ನೀಡಿತ್ತು. ಸುಮಾರು 14 ಜಾಮೀನು ಷರತ್ತುಗಳನ್ನು ವಿಧಿಸಲಾಗಿತ್ತು. ತಲಾ 1 ಲಕ್ಷ ರೂಪಾಯಿಯ ಪರ್ಸನಲ್ ಬಾಂಡ್ನೊಂದಿಗೆ, ಒಬ್ಬರು ಅಥವಾ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿತ್ತು. ಅಲ್ಲದೇ ಪ್ರತಿ ಶುಕ್ರವಾರ ಎಲ್ಲರೂ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯೊಳಗೆ ಮುಂಬೈ ಕಚೇರಿಗೆ ಹಾಜರಾಗಿ ಸಹಿ ಮಾಡಬೇಕೆಂದು ಬಾಂಬೆ ಹೈಕೋರ್ಟ್ ಷರತ್ತು ವಿಧಿಸಿತ್ತು.
ಎನ್‌ಸಿಬಿ ತಂಡವು ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿ, ಶಾರೂಖ್ ಖಾನ್ ಪುತ್ರ ಸೇರಿ ಕೆಲವರನ್ನು ಬಂಧಿಸಿತ್ತು. ಮುನ್ಮುನ್ ಧಮೇಚಾರನ್ನು ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಇರಿಸಿದ್ದು, ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ನನ್ನು ಅರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು.
ಈ ಪ್ರಕರಣವನ್ನು ಸದ್ಯಕ್ಕೆ ಮುಂಬೈ ಪೊಲೀಸರು ಮತ್ತು ಎನ್‌ಸಿಬಿ ತನಿಖೆ ನಡೆಸುತ್ತಿದ್ದು, ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 'ಅಪ್ಪು' ಪಾರ್ಥಿವ ಶರೀರದ ಶಾಸ್ತ್ರೋಕ್ತ ಅಂತ್ಯಕ್ರಿಯೆ: ಸಕಲ ಸರ್ಕಾರಿ ಗೌರವ, ಗಣ್ಯಾತಿಗಣ್ಯರ ಉಪಸ್ಥಿತಿ