ಪುಣೆ(ಮಹಾರಾಷ್ಟ್ರ): ಪಾಕಿಸ್ತಾನಿ ಏಜೆಂಟ್ ಜೊತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರು ಭಾರತದ ಕ್ಷಿಪಣಿ ವ್ಯವಸ್ಥೆ ಮತ್ತು ರಕ್ಷಣಾ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮಹಿಳೆಯ ಆಕರ್ಷಣೆಗೆ ಒಳಗಾಗಿ(ಹನಿಟ್ರ್ಯಾಪ್) ರಹಸ್ಯ ಸಂಗತಿಗಳ ಬಗ್ಗೆ ಆಕೆಯೊಂದಿಗೆ ಮಾತನಾಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ವಾರ ಇಲ್ಲಿನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರದೀಪ್ ಕುರುಲ್ಕರ್ ಡಿಆರ್‌ಡಿಒ ಪುಣೆ ಪ್ರಯೋಗಾಲಯದ ನಿರ್ದೇಶಕರಾಗಿದ್ದರು. ಪಾಕಿಸ್ತಾನಿ ಗುಪ್ತಚರ ದಳದ ಜರಾ ದಾಸ್‌ಗುಪ್ತಾ ಎಂಬ ಹೆಸರಿನ ಏಜೆಂಟ್ ಜೊತೆಗೆ ವಿಜ್ಞಾನಿ ಸಂಪರ್ಕ ಹೊಂದಿದ್ದರು. ವರ್ಗೀಕೃತ ರಕ್ಷಣಾ ಯೋಜನೆಗಳ ಜೊತೆಗೆ ಭಾರತೀಯ ಕ್ಷಿಪಣಿ ವ್ಯವಸ್ಥೆಗಳ ಬಗ್ಗೆ ಆಕೆಯ ಜೊತೆಗೆ ಮಾತನಾಡಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಾಪ್ ಮೂಲಕ ಚಾಟ್: ವಿಜ್ಞಾನಿ ಪ್ರದೀಪ್ರನ್ನು ದೇಶದ ಗೌಪ್ಯ ಕಾಯ್ದೆಯಡಿ ಮೇ 3ರಂದು ಬಂಧಿಸಲಾಗಿದೆ. ಸದ್ಯ ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕುರುಲ್ಕರ್ ಮತ್ತು ಜರಾ ದಾಸ್‌ಗುಪ್ತಾ ವಾಟ್ಸಾಪ್ ವಾಯ್ಸ್ ಮೆಸೇಜ್ ಮತ್ತು ವಿಡಿಯೋ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಜರಾ ದಾಸ್‌ಗುಪ್ತಾ ತನ್ನನ್ನು ಇಂಗ್ಲೆಂಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದಾಳೆ. ಬಳಿಕ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಪ್ರದೀಪ್ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ತನಿಖೆಯ ವೇಳೆ ಆಕೆಯ ಐಪಿ ವಿಳಾಸವನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಎಟಿಎಸ್ ತಿಳಿಸಿದೆ.
ಸೂಕ್ಷ್ಮ ಮಾಹಿತಿ ಹಂಚಿಕೆ: ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಸೇರಿದಂತೆ ಇತರ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನಿ ಏಜೆಂಟ್ ಪ್ರಯತ್ನಿಸಿದ್ದರು. ಆಕೆಯಿಂದ ಆಕರ್ಷಿತರಾದ ಕುರುಲ್ಕರ್, ಡಿಆರ್‌ಡಿಒದ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಯನ್ನು ತಮ್ಮ ವೈಯಕ್ತಿಕ ಫೋನ್‌ನಲ್ಲಿ ಸಂಗ್ರಹಿಸಿ ನಂತರ ಅದನ್ನು ಜಾರಾ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರೂ 2022 ರ ಜೂನ್ನಿಂದ ಡಿಸೆಂಬರ್ವರೆಗೆ ಸಂಪರ್ಕದಲ್ಲಿದ್ದರು. ಕುರುಲ್ಕರ್ ಅವರ ಚಟುವಟಿಕೆಗಳ ಮೇಲೆ ಶಂಕೆ ವ್ಯಕ್ತವಾಗಿ ಆಂತರಿಕ ತನಿಖೆ ಆರಂಭಿಸುವ ಮೊದಲು ಅವರು ಪಾಕ್ ಏಜೆಂಟ್ ಜೊತೆ ಸಂಪರ್ಕ ಕಡಿದುಕೊಂಡಿದ್ದರು. ಇದಾದ ಬಳಿಕ ಮತ್ತೊಂದ ಸಂಖ್ಯೆಯಿಂದ ಆಕೆ ಪ್ರದೀಪ್ರನ್ನು ಮರು ಸಂಪರ್ಕಿಸಿದ್ದರು. ಯಾವುದೇ ಸೂಕ್ಷ್ಮ ವಿಷಯಗಳನ್ನು ಹಂಚಿಕೆಗೆ ನಿರ್ಬಂಧವಿದ್ದಾಗ್ಯೂ ಅವರು ನಿಯಮ ಮೀರಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹವಾಮಾನ ವೈಪರೀತ್ಯ : ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನಗಳು