ಕೋಲ್ಕತ್ತಾ(ಪಶ್ಚಿಮ ಬಂಗಾಳ): ರಾಷ್ಟ್ರಪತಿ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದಿರುವ ಪಶ್ಚಿಮ ಬಂಗಾಳ ಸಿಎಂ ಬ್ಯಾನರ್ಜಿ, ದ್ರೌಪದಿ ಮುರ್ಮು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಉಚ್ಛರಿಸಿದ್ದಾರೆ.
ಇಸ್ಕಾನ್ ರಥಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರ ಉಮೇದುವಾರಿಕೆ ಸಲ್ಲಿಕೆ ಬಗ್ಗೆ ಬಿಜೆಪಿ ಮೊದಲೇ ತಿಳಿಸಿದ್ದರೆ, ಅವರನ್ನು ಬೆಂಬಲಿಸುವ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿರುವ ದಿಢೀರ್ ರಾಜಕೀಯ ಬೆಳವಣಿಗೆ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗೆಲುವಿನ ಸಾಧ್ಯತೆ ಹೆಚ್ಚಿಸಿವೆ. ಇದೀಗ ಎನ್ಡಿಎ ಸಂಖ್ಯೆ ಹೆಚ್ಚಾಗಿರುವ ಕಾರಣ ಗೆಲುವು ಖಚಿತ. ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಮುರ್ಮು ಹೆಸರು ಘೋಷಿಸುವ ಮೊದಲು ಬಿಜೆಪಿ ನನ್ನ ಸಲಹೆ ಕೇಳಿದ್ದರೆ ನಾನು ಪರಿಗಣಿಸುತ್ತಿದ್ದೆ. ಆದರೆ, ಇದೀಗ ವಿರೋಧ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ': ರಘುಬರ್ ದಾಸ್
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು, ಪ್ರತಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ.