ನವದೆಹಲಿ: ಭಾರತದಲ್ಲಿ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ಹೊಂದಾಣಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದ್ದೇವೆ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್‌ಡಿಐಎಫ್) ಮಂಗಳವಾರ ಮಾಹಿತಿ ನೀಡಿವೆ.
ಕೇಂದ್ರ ಔಷಧ ಪ್ರಯೋಗಾಲಯದಿಂದ ಅನುಮತಿ ಸಿಕ್ಕ ನಂತರ ಪ್ರಯೋಗಗಳನ್ನು ಆರಂಭಿಸಲಾಗಿದೆ ಎಂದು ಎರಡೂ ಸಂಸ್ಥೆಗಳು ಸ್ಪಷ್ಟನೆ ನೀಡಿವೆ. ಈ ಪ್ರಯೋಗ ಬಹುಕೇಂದ್ರಿತವಾಗಿದ್ದು, ಲಸಿಕೆಯ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿಯನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಎರಡೂ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಜೆಎಸ್ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆ ಈ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸಲಿದೆ. ಇದರ ಜೊತೆಗೆ ಡಾ. ರೆಡ್ಡೀಸ್ ಲ್ಯಾಬೋರೇಟರಿಯ ಜೊತೆಗೆ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿಐಆರ್ಎಸಿ), ಬಯೋಟೆಕ್ನಾಲಜಿ ಇಲಾಖೆ (ಡಿಬಿಟಿ) ಕೂಡ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿವೆ.
ಇತ್ತೀಚೆಗೆ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಕ್ಲಿನಿಕಲ್ ಟ್ರಯಲ್ ಡೇಟಾದ ಎರಡನೇ ಮಧ್ಯಂತರ ವಿಶ್ಲೇಷಣೆ ಪ್ರಕಟಿಸಿತ್ತು. ಈ ವರದಿಯಲ್ಲಿ ಲಸಿಕೆಯ ಮೊದಲ ಡೋಸ್ ನೀಡಿದ 28 ದಿನಕ್ಕೆ ಶೇಕಡಾ 91.4ರಷ್ಟು ಪರಿಣಾಮಕಾರಿ ಹಾಗೂ 42 ದಿನಗಳ ನಂತರ ಶೇಕಡಾ 95ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ತಿಳಿದು ಬಂದಿದೆ ಎಂದು ಹೇಳಿಕೆ ನೀಡಲಾಗಿತ್ತು.
ಪ್ರಸ್ತುತ 40 ಸಾವಿರ ಸ್ವಯಂಸೇವಕರು ಸ್ಪುಟ್ನಿಕ್ ವಿ ಕ್ಲಿನಿಕಲ್ ಪ್ರಯೋಗಗಳ 3ನೇ ಹಂತದಲ್ಲಿ ಭಾಗವಹಿಸುತ್ತಿದ್ದಾರೆ.