ತಿರುವನಂತಪುರಂ (ಕೇರಳ): ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಮಹಿಳೆ ಸೇರಿ ಕುಟುಂಬದ ನಾಲ್ವರು ಸದಸ್ಯರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನೆಡುಮಂಗಡ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಸಿಜೊ ರಾಜನ್, ಪೋಷಕರು ಮತ್ತು ಸಹೋದರರನ್ನು ಒಳಗೊಂಡ ಕುಟುಂಬ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೇರಳ ಹೈಕೋರ್ಟ್ ಜಾಮೀನು ರದ್ದುಗೊಳಿಸಿ ಕೆಳ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕುಟುಂಬ ಶರಣಾಗಿದ್ದು, ಇಲ್ಲಿಯೂ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದು ಪ್ರತಿಯೊಬ್ಬರ ಕರ್ತವ್ಯ, ಇಂಥ ವಿಚಾರಗಳಲ್ಲಿ ಮೃದು ಧೋರಣೆ ತೋರಿದರೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಳಿಕ ಮಾತನಾಡಿದ ಸಂತ್ರಸ್ತೆಯ ಪರ ವಕೀಲ ಥಾಮಸ್ ಅನಕ್ಕಲ್ಲುಂಕಲ್, ಕುಟುಂಬಕ್ಕೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ. ನ್ಯಾಯಾಲಯ ನೀಡಿರುವ ತೀರ್ಪು ಸಮಾಜಕ್ಕೆ ಸರಿಯಾದ ಸಂದೇಶ ರವಾನಿಸಿದೆ ಎಂದರು.
ಸಿಜೋ ರಾಜನ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಸೆಪ್ಟೆಂಬರ್ 14, 2020 ರಂದು ಸಂತ್ರಸ್ತೆಯನ್ನು ಮದುವೆಯಾಗಿದ್ದರು. ಈ ವೇಳೆ, ಮಹಿಳೆಯ ತಂದೆ ಕಾರು, ಹಣ - ಆಸ್ತಿ ಎಲ್ಲವನ್ನೂ ನೀಡಿದ್ದರು. ಆದರೆ, ಇನ್ನೂ ಹೆಚ್ಚಿನ ಹಣ ತರುವಂತೆ ಸಿಜೋ ಕುಟುಂಬಸ್ಥರು ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಹಿಳೆ ಠಾಣೆ ಮೆಟ್ಟಿಲೇರಿದ್ದರು.
ಕೆಲ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಗಂಡಂದಿರು ಎಷ್ಟೇ ಚಿತ್ರ ಹಿಂಸೆ ನೀಡಿದರೂ, ಸಹಿಸಿಕೊಂಡು ಇರುತ್ತಾರೆ. ಮಹಿಳೆಯರು ಅಂಥ ಮನೋಭಾವನೆಯಿಂದ ಹೊರಬರಬೇಕು ಎಂದು ನ್ಯಾಯಾಲಯ ತಿಳಿಸಿದೆ.
ವರದಕ್ಷಿಣೆ ಪಿಡುಗಿನ ವಿರುದ್ಧ ಹೋರಾಡಲು ಕೇರಳ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ವಿಭಿನ್ನ ಹೋರಾಟ ಮಾಡುತ್ತಿದ್ದಾರೆ.