ನವದೆಹಲಿ: ವಾಟ್ಸ್ಆ್ಯಪ್ನ ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳುವುದು ಸ್ವಯಂಪ್ರೇರಿತ ವಿಚಾರ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ನಿಯಮಗಳನ್ನು ಒಪ್ಪಲು ಸಾಧ್ಯವಾಗದಿದ್ದರೆ ಆ ಆ್ಯಪ್ ಬಳಸಬೇಡಿ ಎಂದು ಸಲಹೆಯನ್ನೂ ನೀಡಿದೆ.
ವಾಟ್ಸ್ಆ್ಯಪ್ನ ಗೌಪ್ಯತಾ ನೀತಿ ಪ್ರಶ್ನಿಸಿ ವಕೀಲರೊಬ್ಬರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಸಚ್ದೇವ, ವಾಟ್ಸ್ಆ್ಯಪ್ ಖಾಸಗಿ ಆ್ಯಪ್ ಆಗಿದೆ. ಅದರ ಗೌಪ್ಯತಾ ನೀತಿಗಳನ್ನು ಒಪ್ಪಿಕೊಳ್ಳುವುದು, ಬಿಡುವುದು ಬಳಕೆದಾರರಿಗೆ ಬಿಟ್ಟ ವಿಚಾರ. ಮೊಬೈಲ್ ಅಪ್ಲಿಕೇಶನ್ಗಳ ನಿಯಮ ಮತ್ತು ಷರತ್ತುಗಳನ್ನು ಓದಿದರೆ ನೀವು ಯಾವುದಕ್ಕೆ ಒಪ್ಪಿದ್ದೀರಿ ಎಂದು ನಿಮಗೆ ಆಶ್ವರ್ಯವಾಗುತ್ತದೆ. ಕೇವಲ ವಾಟ್ಸ್ಆ್ಯಪ್ ಮಾತ್ರವಲ್ಲ, ಗೂಗಲ್ ಮ್ಯಾಪ್ ಕೂಡ ನಿಮ್ಮ ಎಲ್ಲಾ ಡೇಟಾ ಸಂಗ್ರಹಿಸುತ್ತದೆ ಎಂದು ಅರ್ಜಿದಾರರಿಗೆ ತಿಳಿಸಿದ್ದಾರೆ.
ಹೊಸ ನೀತಿಯು ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಕೀಲರ ಅರ್ಜಿಯಲ್ಲಿ ನಮೂದಿಸಲಾಗಿದೆ.
ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಮುಕುಲ್ ರೋಹ್ಟಗಿ, ಈ ಅರ್ಜಿಯಲ್ಲಿನ ಅಂಶಗಳು ನಿರಾಧಾರವಾಗಿದ್ದು, ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕುಟುಂಬ ಮತ್ತು ಸ್ನೇಹಿತರ ನಡುವಿನ ಖಾಸಗಿ ಚಾಟ್ಗಳು ಎನ್‌ಕ್ರಿಪ್ಟ್ ಆಗಿರುತ್ತದೆ. ಅದನ್ನು ವಾಟ್ಸ್ಆ್ಯಪ್ ಸಂಗ್ರಹಿಸಲಾಗುವುದಿಲ್ಲ ಮತ್ತು ಹೊಸ ನೀತಿಯಡಿಯಲ್ಲಿ ಈ ನಿಯಮವು ಬದಲಾಗುವುದಿಲ್ಲ ಎಂದು ಅವರು ಕೋರ್ಟ್ಗೆ ತಿಳಿಸಿದರು. ನೀತಿಯ ಬದಲಾವಣೆಯು ವಾಟ್ಸ್ಆ್ಯಪ್ನಲ್ಲಿನ ವ್ಯವಹಾರ ಚಾಟ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟನೆ ನೀಡಿದರು.