ಚೆನ್ನೈ (ತಮಿಳುನಾಡು) : ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದ ತಮಿಳುನಾಡು ಸಚಿವ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಈಗ ರಾಮಮಂದಿರದ ಬಗ್ಗೆ ಅಪಸ್ವರ ಎತ್ತಿದ್ದಾರೆ. "ಮಸೀದಿ ಕೆಡವಿ ಮಂದಿರವನ್ನು ನಿರ್ಮಾಣ ಮಾಡಿದ್ದನ್ನು ಒಪ್ಪುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಡಿಎಂಕೆ ಪಕ್ಷ ರಾಮಮಂದಿರದ ವಿರುದ್ಧವಾಗಿಲ್ಲ. ಆದರೆ, ಅಲ್ಲಿದ್ದ ಮಸೀದಿಯನ್ನು ಕೆಡವಿ ದೇಗುಲ ನಿರ್ಮಿಸಿದ್ದನ್ನು ವಿರೋಧಿಸುತ್ತದೆ. ಮಾಜಿ ಸಿಎಂ, ಡಿಎಂಕೆ ಅಧಿನಾಯಕ ಎಂ.ಕರುಣಾನಿಧಿ ಅವರು ಕೂಡ ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯ ವಿರುದ್ಧ ಇರಲಿಲ್ಲ ಎಂದು ಉದಯನಿಧಿ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
1992 ರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಿದ ಡಿಎಂಕೆ ಸಚಿವ, ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ನಮಗೆ ಸಮಸ್ಯೆ ಇಲ್ಲ. ಮಸೀದಿ ಕೆಡವಿದ ನಂತರ ಮಂದಿರ ನಿರ್ಮಾಣ ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಧರ್ಮ ಮತ್ತು ರಾಜಕೀಯ ಎರಡನ್ನೂ ಬೆರೆಸಬಾರದು. ಇದರ ವಿರುದ್ಧ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ನೀಟ್ ವಿರುದ್ಧ ಸಹಿ ಅಭಿಯಾನ: ರಾಜ್ಯದಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯ ವಿರುದ್ಧ ಸಹಿ ಅಭಿಯಾನ ನಡೆಯುತ್ತಿದೆ. ಪರೀಕ್ಷೆಯು ರಾಜ್ಯದ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಹೀಗಾಗಿ ಅದನ್ನು ರದ್ದು ಮಾಡಬೇಕು. ಈಗಾಗಲೇ 85 ಲಕ್ಷ ಜನರಿಂದ ಸಹಿ ಸಂಗ್ರಹ ಮಾಡಲಾಗಿದೆ. ಜನವರಿ 21 ರಂದು ಸೇಲಂನಲ್ಲಿ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಅದನ್ನ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ನಂತರ, ಆನ್‌ಲೈನ್ ಮತ್ತು ಅಂಚೆ ಮೂಲಕ ಸ್ವೀಕರಿಸಿದ ಸಹಿಗಳನ್ನು ಸೇರಿದಂತೆ ಸಂಗ್ರಹಿಸಲಾದ ನಮೂನೆಗಳನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು. ಸೇಲಂ ಸಮ್ಮೇಳನದಲ್ಲಿ ಸುಮಾರು 3-4 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ ಜನವರಿ 22 ರಂದು ಉದ್ಘಾಟನೆಯಾಗಲಿದೆ. ಅಂದು ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ನೂತನ ವಿಗ್ರಹದ 'ಪ್ರಾಣ ಪ್ರತಿಷ್ಠಾ' ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ರಾಮನ ವಿಗ್ರಹವನ್ನು ಜಗುಲಿಯ ಮೇಳೆ ಅವರೇ ಪ್ರತಿಷ್ಠಾಪನೆ ಮಾಡಲಿದ್ದಾರೆ. ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ವಿಗ್ರಹವನ್ನು ಅಂದು ಮಧ್ಯಾಹ್ನ 12.28 ಕ್ಕೆ ಆರಂಭಗೊಂಡು 12.30 ರ ಒಳಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.
ಇದನ್ನೂ ಓದಿ: ಬಿಜೆಪಿ ನನ್ನ ಹೇಳಿಕೆ ತಿರುಚಿ ದೇಶವೇ ಮಾತನಾಡುವ ಹಾಗೆ ಮಾಡಿತು: ಉದಯನಿಧಿ ಸ್ಟಾಲಿನ್