ಮಿರ್ಜಾಪುರ(ಉತ್ತರ ಪ್ರದೇಶ): ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ. ಅನ್ನ ಹಾಕಿದ ಮಾಲೀಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಬಲಿ ನೀಡಿರುವ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಅಂತಹದೊಂದು ಪ್ರಕರಣ ಇದೀಗ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಮಾಲೀಕನ ಜೀವ ಉಳಿಸಲು ವಿಷಪೂರಿತ ಹಾವಿನ ವಿರುದ್ಧ ಸಾಕು ನಾಯಿ ಹೋರಾಡಿ ಗೆದ್ದಿದೆ.
ಜಿಲ್ಲೆಯ ಚಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸದ್ಯ ಇಡೀ ಪ್ರದೇಶದಲ್ಲಿ ಶ್ವಾನದ ವಿಷಯ ಚರ್ಚೆಯಾಗ್ತಿದ್ದು, ನಾಯಿಯ ನಿಷ್ಠೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಿಲತಿ ಎಂಬ ಗ್ರಾಮದಲ್ಲಿ ಪ್ರವೇಶ್ ದುಬೆ ಎಂಬುವರು ಹೆಣ್ಣು ನಾಯಿ ಸಾಕಿದ್ದಾರೆ. ಪ್ರತಿದಿನ ಮನೆಯ ಮುಂದೆ ಕುಳಿತು ಕಾವಲು ಕಾಯುತ್ತಿದೆ. ಕಳೆದ ಗುರುವಾರ ಪ್ರವೇಶ್ ಮನೆಯೊಳಗೆ ಕುಳಿತುಕೊಂಡಿದ್ದರು. ಈ ವೇಳೆ, ಸುಮಾರು 8 ಅಡಿ ಉದ್ದದ ವಿಷಕಾರಿ ಹಾವೊಂದು ಮನೆಯ ಮೆಟ್ಟಿಲು ಹತ್ತಿರ ಬಂದಿತ್ತು. ಅದನ್ನು ನೋಡಿರುವ ಶ್ವಾನ ಬೊಗಳಲು ಶುರು ಮಾಡಿದೆ. ನಾಯಿಯ ಧ್ವನಿ ಕೇಳಿರುವ ಪ್ರವೇಶ್ ಯಾವುದೋ ಪ್ರಾಣಿ, ಅಥವಾ ವ್ಯಕ್ತಿ ಬಂದಿರಬಹುದೆಂದು ಮನೆಯೊಳಗಿನಿಂದ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಶ್ವಾನ ವಿಷಕಾರಿ ಹಾವಿನೊಂದಿಗೆ ಕಾದಾಡುತ್ತಿತ್ತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಅದರೊಂದಿಗೆ ಸೆಣಸಾಡಿರುವ ಶ್ವಾನ, ವಿಷಕಾರಿ ಹಾವನ್ನು ಕೊಂದು ಹಾಕಿದೆ. ಇದಾದ ಬಳಿಕ ಪ್ರವೇಶ್ ದುಬೆ ಅವರು ಸತ್ತ ಹಾವನ್ನು ಹೊಲದಲ್ಲಿ ಎಸೆದಿದ್ದಾರೆ.
ಇದನ್ನೂ ಓದಿ: 70 ಕೊಲೆ, 35ಕ್ಕೂ ಹೆಚ್ಚು ಕಳ್ಳತನ ಕೇಸ್ ಪತ್ತೆ ಹಚ್ಚಿದ್ದ ಲೇಡಿ ಸಿಂಗಂ ಶ್ವಾನ ತುಂಗಾ ಸಾವು
ಕಳೆದ ಕೆಲ ವರ್ಷಗಳಿಂದ ಶ್ವಾನ ಪ್ರವೇಶ್ ಮನೆಯಲ್ಲಿದ್ದು, ಕುಟುಂಬದೊಂದಿಗೆ ಹೆಚ್ಚು ಪ್ರೀತಿಯಿಂದ ಉಳಿದುಕೊಂಡಿದೆ. ಇದೀಗ ಜೀವದ ಹಂಗು ತೊರೆದು ನಿಯತ್ತಿನಿಂದ ಅನ್ನ ನೀಡಿ ಸಾಕಿದ್ದ ಮನೆ ಮಾಲೀಕನ ಋುಣ ತೀರಿಸುವ ಕೆಲಸ ಮಾಡಿದೆ.