ಫರಿದಾಬಾದ್(ಹರಿಯಾಣ): ಇಲ್ಲಿನ ಇಎಸ್‌ಐ ಆಸ್ಪತ್ರೆಯ ವೈದ್ಯರು ಸುಮಾರು 10 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿ ಕಾರ್ಮಿಕನ ದೇಹದಿಂದ ಬೇರ್ಪಟ್ಟಿದ್ದ ಕೈಯನ್ನು ಪುನಃ ಯಶಸ್ವಿಯಾಗಿ ಜೋಡಿಸಿದ್ದಾರೆ. ಫರಿದಾಬಾದ್‌ನ ಸಂಜಯ್ ಕಾಲೋನಿ ನಿವಾಸಿ ಅಭಯ್ ಭೂಷಣ್ ಎಂಬುವವರು ಮಷಿನ್ ಆಪರೇಟ್ ಮಾಡುವಾಗ ಕೈ ತುಂಡಾಗಿತ್ತು. ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಎಸ್‌ಐನ ವೈದ್ಯಕೀಯ ಅಧೀಕ್ಷಕ ಡಾ.ಅನಿಲ್ ಪಾಂಡೆ ಮಾತನಾಡಿ, ಫರಿದಾಬಾದ್‌ನ ಸಂಜಯ್ ಕಾಲೋನಿಯಲ್ಲಿ ವಾಸಿಸುವ 41 ವರ್ಷದ ಅಭಯ್ ಭೂಷಣ್ ಅವರು ಕೈ ತುಂಡಾಗಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಭೂಷಣ್ ಅವರು ಪಲ್ವಾಲ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಯಂತ್ರವನ್ನು ನಿರ್ವಹಿಸುತ್ತಿದ್ದಾಗ ಕೈ ತುಂಡಾಗಿದೆ. ತಕ್ಷಣ ಕಂಪನಿಯ ಉದ್ಯೋಗಿಗಳು ಅವರನ್ನು ಚಿಕಿತ್ಸೆಗಾಗಿ ESI ಆಸ್ಪತ್ರೆಗೆ ಕರೆತಂದರು. ಜೊತೆಗೆ ಸಂಜಯ್ ಅವರ ತುಂಡಾದ ಕೈಯನ್ನು ಸಹ ಪಾಲಿಥಿನ್ ಚೀಲದಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು ಎಂದರು.
ಸತತ 10 ಗಂಟೆಗಳ ಕಠಿಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯ ಕೈಯನ್ನು ಮರು ಜೋಡಿಸಿದ್ದಾರೆ. ನಂತರ ಜೋಡಣೆಯಾದ ಕೈ ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ವೈದ್ಯರು ರೋಗಿಯ ಮೇಲೆ ನಿಗಾ ಇಟ್ಟಿದ್ದರು. ಸದ್ಯ ರೋಗಿಗೆ ಜೋಡಿಸಲಾದ ಕೈ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ವೈದ್ಯರು ತಿಳಿದ ನಂತರ ಬುಧವಾರ ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ಬಗ್ಗೆ ಘೋಷಿಸಿದ್ದಾರೆ.
ಇದನ್ನೂ ಓದಿ:ಆಟಿಸಂ ಹೊಂದಿರುವ ಮಕ್ಕಳಲ್ಲಿ ಆಕ್ರಮಣಶೀಲತೆ ಹೆಚ್ಚು: ಅಧ್ಯಯನದಿಂದ ಬಹಿರಂಗ
ರೋಗಿಯ ತುಂಡರಿಸಿದ ಕೈಯನ್ನು ಯಶಸ್ವಿಯಾಗಿ ಜೋಡಿಸಲಾಗಿದೆ ಮತ್ತು ಅವರ ಕೈ ಸರಿಯಾಗಿ ಕೆಲಸ ಮಾಡುತ್ತಿದೆ. ಅವರು ಮೊದಲಿನಂತೆಯೇ ಎಲ್ಲಾ ರೀತಿಯ ಕೆಲಸಗಳನ್ನು ಮಾಡಬಲ್ಲರು. ಇದು ನಮಗೆ ಸಾಧನೆಯ ವಿಷಯವಾಗಿದೆ. ಫರಿದಾಬಾದ್‌ನ ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಇಎಸ್‌ಐ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಪ್ಲಾಸ್ಟಿಕ್ ಸರ್ಜನ್ ಡಾ.ಭೂಪೇಂದ್ರ ಸಿಂಗ್, ಪ್ರೊಫೆಸರ್ ಡಾ.ಆರ್.ಪಿ.ನಗರ, ಸಿಸಿಯು ಮುಖ್ಯಸ್ಥ ಡಾ.ವಿ.ಕೆ.ವರ್ಮಾ, ಅರಿವಳಿಕೆ ವಿಭಾಗದ ಪ್ರಾಧ್ಯಾಪಕ ಅನುಪ್ ಗೋಗೈ, ಪ್ಲಾಸ್ಟಿಕ್ ಸರ್ಜನ್ ಡಾ.ಆರ್.ಕೆ.ನಾರಾಯಣ್ ಇದ್ದರು. ಏಪ್ರಿಲ್ 24 ರಂದು ರೋಗಿಗೆ ಆಪರೇಷನ್ ಮಾಡಲಾಗಿತ್ತು. ತುಂಡಾಗಿದ್ದ ಕೈಯನ್ನು ಜೋಡಿಸಿ ಅದನ್ನು ಮೊದಲಿನಂತೆ ಮಾಡಿರುವುದು ನಮಗೆ ದೊಡ್ಡ ಸವಾಲಾಗಿತ್ತು. ನಾವು ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದೀವಿ. ಈ ಶಸ್ತ್ರಚಿಕಿತ್ಸಾ ಸಾಧನೆಯಲ್ಲಿ ನರರೋಗ ವಿಭಾಗದ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ರೋಗಿಯ ಪತ್ನಿ ಸವಿತಾ ಮಾತನಾಡಿ, ಮೊದಲು ನಾನು ಭರವಸೆಯನ್ನು ಬಿಟ್ಟಿದ್ದೆ. ಆದರೆ, ಇದು ಒಂದು ಪವಾಡ. ವೈದ್ಯರು ಅದ್ಭುತ ಮಾಡಿದ್ದಾರೆ. ನನ್ನ ಗಂಡನ ತುಂಡಾದ ಕೈಯನ್ನು ಪುನಃ ಜೋಡಿಸಿದ್ದಕ್ಕೆ ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಧುಮೇಹ ಸಮಸ್ಯೆ.. ನಿಯಮಿತ ವ್ಯಾಯಾಮ ಮಾಡಿದರೂ ಪ್ರತಿ ಅರ್ಧಗಂಟೆಗೊಮ್ಮೆ 3 ನಿಮಿಷ ವಾಕ್ ಮಾಡಿ