ಸಂಬಲ್ಪುರ/ಒಡಿಶಾ: 'ವೈದ್ಯೋ ನಾರಾಯಣೋ ಹರಿ:' ಅನ್ನೋ ಮಾತು ಕೆಲವು ವೈದ್ಯರನ್ನು ನೋಡಿದಾಗ ಖಂಡಿತವಾಗಿಯೂ ನಿಜ ಅನಿಸುತ್ತೆ. ಯಾಕಂದ್ರೆ ವೃತ್ತಿಬದ್ಧತೆಗಿಂತ ಹಣ ಸಂಪಾದನೆಯನ್ನೇ ಗುರಿಯಾಗಿರಿಸಿಕೊಂಡು ಡಾಕ್ಟರ್ ವೃತ್ತಿ ಆಯ್ಕೆ ಮಾಡಿಕೊಳ್ಳುವ ಹಲವರ ನಡುವೆಯೇ ಜನಸೇವೆಗೆಂದೇ ಕೆಲವರು ವೈದ್ಯರಾಗಿದ್ದಾರೆ. ಅಂತವರಲ್ಲಿ ಒಡಿಶಾದ ಒಂದು ರೂಪಾಯಿ ಡಾಕ್ಟರ್ ರಾಮ್‌ಚಂದಾನಿ ಸಹ ಒಬ್ಬರು.

ಒಡಿಶಾದ ಬುರ್ಲಾ ಭೀಮ್ಸರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಮ್‌ಚಂದಾನಿ ಅವರು ತಾವು ವಾಸವಿರುವ ಬಾಡಿಗೆ ಮನೆಯ ಪಕ್ಕದಲ್ಲೇ ಕ್ಲಿನಿಕ್ ಒಂದನ್ನು ತೆರೆದಿದ್ದಾರೆ. ಇಲ್ಲಿಗೆ ಬರುವ ರೋಗಿಗಳಿಗೆ ಕೇವಲ ಒಂದು ರೂಪಾಯಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಡ್ಯೂಟಿ ಮುಗಿಸಿ ಸಂಜೆ 6 ರಿಂದ 7 ಗಂಟೆವರೆಗೆ ಈ ಕ್ಲಿನಿಕ್ಗೆ ಬರುವ ಬಡರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇವರ ಪತ್ನಿ ಸಹ ದಂತವೈದ್ಯೆಯಾಗಿದ್ದು, ಅವರು ಸಹ ರಾಮ್‌ಚಂದಾನಿ ಅವರಿಗೆ ನೆರವಾಗುತ್ತಾರೆ.

ಇನ್ನು ಡಾ.ರಾಮ್‌ಚಂದಾನಿ ಈ ಹಿಂದೆ ಬಡವರ ಅನುಕೂಲಕ್ಕಾಗಿ ಸಾಕಷ್ಟು ಮಾನವೀಯ ಕೆಲಸ ಮಾಡಿದ್ದು, ಇವರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ಬಿಲ್ ಕೊಟ್ಟು ರೋಗಿಗಳನ್ನು ಮತ್ತಷ್ಟು ಹಿಂಡಿ ಹಿಪ್ಪೆ ಮಾಡುವ ಕೆಲ ಖಾಸಗಿ ಆಸ್ಪತ್ರೆಗಳ ಮಧ್ಯೆ ಡಾ. ರಾಮಚಂದಾನಿ ಅವರ ಈ ಸೇವೆ ಬಡಪಾಯಿಗಳಿಗೆ ವರದಾನವಾಗಿದೆ.
ಇದನ್ನೂ ಓದಿ:ಕಲ್ಯಾಣ ಕರ್ತೃ.. ಪ್ರೇಮಿಗಳ ಪ್ರೇಮಿ.. 200ಕ್ಕೂ ಹೆಚ್ಚು ಜೋಡಿ ಅಂತರ್ಜಾತಿ ಮದುವೆ ಮಾಡಿಸಿದ 'ಪ್ರೇಮಾ'ತ್ಮ