ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದೆ. ಈ ವೇಳೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶಾಸಕ ಡಾ.ಪಿ.ಶರವಣನ್ ಇಂದು ಬಿಜೆಪಿಗೆ ಸೇರ್ಪಡೆಯಾದರು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಚೆನ್ನೈನಲ್ಲಿ ಶರವಣನ್ ಪಕ್ಷಕ್ಕೆ ಸೇರಿದರು. ಶರವಣನ್ ಅವರು ತಿರುಪಾರಂಕುಂಡ್ರಮ್ ಕ್ಷೇತ್ರದ ಶಾಸಕರಾಗಿದ್ದು, ವಿಧಾನಸಭೆ ಚುನಾವಣೆಗೆ ಈ ಕ್ಷೇತ್ರವನ್ನು ಡಿಎಂಕೆ ತನ್ನ ಮೈತ್ರಿ ಪಕ್ಷವಾದ ಸಿಪಿಎಂಗೆ ಬಿಟ್ಟುಕೊಟ್ಟಿದೆ. ಇದರಿಂದ ಅಸಮಾಧಾನಗೊಂಡ ಶರವಣನ್ ಡಿಎಂಕೆ ತೊರೆದು ಕಮಲ ಹಿಡಿದಿದ್ದಾರೆ.
ಇದನ್ನೂ ಓದಿ: ರಂಗೇರಿದ ಚುನಾವಣೆ: ಇಂದು ವ್ಹೀಲ್ಚೇರ್ ಮೂಲಕ ದೀದಿ ರೋಡ್ ಶೋ
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಶರವಣನ್, ನಾನು 6 ವರ್ಷಗಳ ಹಿಂದೆ ಬಿಜೆಪಿ ಸದಸ್ಯನಾಗಿದ್ದೆ. ಇಂದು ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಮರಳಿ ಪಕ್ಷಕ್ಕೆ ಸೇರಿಕೊಂಡಿದ್ದು, ತುಂಬಾ ಸಂತೋಷವಾಗಿದ್ದೇನೆ ಎಂದರು.
ಭಾರತದ ಕೋವಿಡ್ ಲಸಿಕೆಯನ್ನು ನಮ್ಮ ದೇಶಕ್ಕೆ ಮಾತ್ರವಲ್ಲ, ಪ್ರಪಂಚದಾದ್ಯಂತ ಕಳುಹಿಸಲಾಗುತ್ತಿದೆ. ಇದು ಬಿಜೆಪಿ ನಾಯಕತ್ವದ ಸಾಧನೆಯಾಗಿದೆ, ಈ ಸತ್ಯವನ್ನು ಯಾರೂ ತಳ್ಳಿಹಾಕುವಂತಿಲ್ಲ ಎಂದು ಪಿಎಂ ಮೋದಿಯನ್ನು ಇದೇ ವೇಳೆ ಹಾಡಿ ಹೊಗಳಿದರು.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ, ಕಾಂಗ್ರೆಸ್, ಸಿಪಿಎಂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿದೆ.