ನವದೆಹಲಿ: ಲಾಕ್ಡೌನ್ ವೇಳೆ ದಾಖಲೆ ಮಟ್ಟದಲ್ಲಿ ಸುಧಾರಣೆ ಕಂಡಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಮತ್ತೆ ಕಳಪೆ ಮಟ್ಟದಲ್ಲೇ ಸಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವುದು ಸೇರಿದಂತೆ ವಾಹನ ದಟ್ಟಣೆಯಿಂದಾಗಿ ಇನ್ನಷ್ಟು ಕಳಪೆ ಮಟ್ಟಕ್ಕೆ ಸಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಪಟಾಕಿ ಸಿಡಿಸುವಿಕೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗಲಿದ್ದು, ದೀಪಾವಳಿ ಅವಧಿಯಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಅತ್ಯಂತ ಕಳಪೆಯಾಗಿರುತ್ತದೆ. ಅದಲ್ಲದೆ ಸಾರಿಗೆ ಸಂಚಾರವು ಈ ವೇಳೆ ಹೆಚ್ಚಾಗಿರುವುದರಿಂದ ಶುದ್ಧ ಗಾಳಿ ದೊರೆಯುವ ಸಾಧ್ಯತೆ ಅತ್ಯಂತ ವಿರಳ ಎಂದು ಕೇಂದ್ರ ಸರ್ಕಾರಿ ಸಂಸ್ಥೆ ತಿಳಿಸಿದೆ.
ದೆಹಲಿಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸಮಯಕ್ಕೆ ವಾಯು ಗುಣಮಟ್ಟ ಸೂಚ್ಯಂಕ (AQI) 369ರಷ್ಟು ದಾಖಲಾಗಿದ್ದು, ಶುಕ್ರವಾರದಂದು 339 ಮತ್ತು ಗುರುವಾರ 314ರಷ್ಟು ವಾಯು ಗುಣಮಟ್ಟದ ಸೂಚ್ಯಂಕ ದಾಖಲಾಗಿತ್ತು.
ದೆಹಲಿಯಲ್ಲಿ ಕಳೆದ ವರ್ಷ ದೀಪಾವಳಿಯಂದು (ಅಕ್ಟೋಬರ್ 27) 24 ಗಂಟೆಗಳ ಸರಾಸರಿ ಎಕ್ಯೂಐ 337 ಹಾಗೂ ಮರು ದಿನ 368ರಿಂದ 400 ದಾಖಲಿಸಿದೆ. ಅದರ ನಂತರ ಮಾಲಿನ್ಯದ ಮಟ್ಟವು ಮೂರು ದಿನಗಳವರೆಗೆ ಕಳಪೆಯಾಗಿತ್ತು.
2018ರಲ್ಲಿ ದೀಪಾವಳಿಯ 24 ಗಂಟೆಗಳ ಸರಾಸರಿ ಎಕ್ಯೂಐ 281 ಆಗಿದ್ದು, ಮರುದಿನ 390ಕ್ಕೆ ಏರಿಕೆಯಾಗಿತ್ತು. ಇನ್ನು 2017ರ ದೀಪಾವಳಿ ಸಮಯದಲ್ಲಿ (ಅಕ್ಟೋಬರ್ 19) ದೆಹಲಿಯ 24 ಗಂಟೆಗಳ ಸರಾಸರಿ ಎಕ್ಯೂಐ 319ರಷ್ಟಿತ್ತು ಎಂದು ಹವಾಮಾನ ತಜ್ಞರು.