ತಿರುವನಂತಪುರಂ / ನವದೆಹಲಿ: ವಿಧಾನಸಭಾ ಚುನಾವಣೆಗೆ ಯುಡಿಎಫ್ ಸ್ಥಾನಗಳ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್, ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತಾಲ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸ್ಥಾನಗಳ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸುವ ಸಲವಾಗಿ ದೆಹಲಿಗೆ ತೆರಳಿದ್ದಾರೆ. ಪಕ್ಷದ ಕುರಿತಾಗಿ ಚರ್ಚೆ ಮತ್ತು ಅಭ್ಯರ್ಥಿಗಳ ಘೋಷಣೆಗಾಗಿ ಮುಲ್ಲಪ್ಪಲ್ಲಿ ರಾಮಚಂದ್ರನ್ ದೆಹಲಿಯಲ್ಲಿ ಉಳಿಯಲಿದ್ದು, ರಮೇಶ್ ಚೆನ್ನಿತಾಲ ಮತ್ತು ಉಮ್ಮನ್ ಚಾಂಡಿ ಕೇರಳಕ್ಕೆ ಮರಳಲಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್, 91 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಈ ಪೈಕಿ 81 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 10 ಸ್ಥಾನಗಳಿಗೆ ಅಭ್ಯರ್ಥಿಗಳು ಯಾರೆಂದು ನಿರ್ಧರಿಸಿಲ್ಲ. ನಾಳೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದರು.
ಓದಿ: ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ ಟಿಎಂಸಿ ಸೇರ್ಪಡೆ
ಮುಸ್ಲಿಂ ಲೀಗ್ 27 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕೇರಳ ಕಾಂಗ್ರೆಸ್ ಇರಿಂಗಲಕುಡ, ಕೊಥಮಂಗಲಂ, ತೊಡುಪುಳಾ, ಇಡುಕ್ಕಿ, ಕದುತುರುತಿ, ಎತ್ತುಮನೂರ್, ಚಂಗನಾಸ್ಸೆರಿ, ಕುಟ್ಟನಾಡ್, ತಿರುವಲ್ಲಾ ಮತ್ತು ತ್ರಿಕ್ಕಿರುಪುರ ಕ್ಷೇತ್ರಗಳು ಸೇರಿದಂತೆ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆರ್‌ಎಸ್‌ಪಿಗೆ 5 ಸ್ಥಾನಗಳನ್ನು ನೀಡಲಾಗಿದೆ. ಆರ್‌ಎಸ್‌ಪಿ ಮಟ್ಟಣ್ಣೂರು, ಚವರ, ಕುನ್ನತೂರು, ಎರಾವಿಪುರಂ ಮತ್ತು ಅಟ್ಟಿಂಗಲ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಎನ್‌ಸಿಪಿ ಎಲಾಥೂರ್ ಮತ್ತು ಪಾಲಾ ಸ್ಥಾನಗಳಲ್ಲಿ, ಮಲಂಪುಳದಲ್ಲಿ ಜನತಾದಳ, ನೆಮ್ಮರಾದಲ್ಲಿ ಸಿಎಂಪಿ ಮತ್ತು ಪಿರವೊಮ್‌ನಲ್ಲಿ ಕೇರಳ ಕಾಂಗ್ರೆಸ್ ಜಾಕೋಬ್ ಸ್ಪರ್ಧಿಸಲಿದೆ. ರಮೇಶ್ ಚೆನ್ನಿತಾಲ ಅವರು ವಡಕಾರದಲ್ಲಿ ಸ್ಪರ್ಧಿಸಿದರೆ ಕೆ.ಕೆ. ರೇಮಾ ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಸ್ಪರ್ಧಿಸುತ್ತಿರುವ ಮತ್ತು ಚರ್ಚೆಗೆ ಗ್ರಾಸವಾಗಿರುವ ಧರ್ಮದೋಮ್ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ರಮೇಶ್ ಚೆನ್ನಿತಾಲ ಸ್ಪಷ್ಟಪಡಿಸಿದರು.