ಹೈದರಾಬಾದ್ : ಕಳೆದ ಕೆಲವು ದಿಗಳಿಂದ ತೆಲಂಗಾಣ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ರಾಜ್ಯದ ರಾಜಣ್ಣ ಸಿರಿಸಿಲ್ಲಾ, ಕರೀಂನಗರ, ಜಗಿತಾಲ್, ನಿಜಾಮಾಬಾದ್, ಕಾಮರೆಡ್ಡಿ, ವಾರಂಗಲ್ ಜಿಲ್ಲೆಗಳಲ್ಲಿ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ಸಿರಿಸಿಲ್ಲಾ ಪಟ್ಟಣದ ಪ್ರಗತಿನಗರ, ಹಳೆ ಬಸ್ ನಿಲ್ದಾಣ, ಸಾಯಿನಗರ, ಅಂಬಿಕಾನಗರ ಮತ್ತು ಇತರ ಕಾಲೋನಿಗಳು ಪ್ರವಾಹಕ್ಕೊಳಗಾಗಿವೆ. ಭಾರಿ ಮಳೆಯಿಂದಾಗಿ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ಪ್ರವಾಹ ರೂಪದಲ್ಲಿ ನೀರು ಹರಿಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ತೇಲಿ ಹೋದ ಗಣೇಶ ಮೂರ್ತಿ : ಸಿರಿಸಿಲ್ಲಾದಲ್ಲಿ ಮಳೆನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಮುಖ ಕಾಲೋನಿಗಳು ಮಳೆ ನೀರಿನಿಂದ ತುಂಬಿ ಹೋಗಿವೆ. ಸಂಕಷ್ಟಹರ ಗಣೇಶನಿಗೂ ಪ್ರವಾಹದ ಸಂಕಷ್ಟ ತಪ್ಪಿಲ್ಲ. ರಸ್ತೆಗಳಲ್ಲಿ ಹರಿಯುವ ಪ್ರವಾಹದ ನೀರಿನಲ್ಲಿ ಗಣೇಶನ ವಿಗ್ರಹ ಕೊಚ್ಚಿ ಹೋಗಿದೆ. ತಗ್ಗು ಪ್ರದೇಶಗಳು ಪ್ರವಾಹದಿಂದ ಮುಳುಗಿವೆ. ಹಲವಾರು ಕಾಲೋನಿಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಸ್ಪೆಷಲ್ ಕಂಟ್ರೋಲ್ ರೂಮ್ : ಸಿರಿಸಿಲ್ಲಾದ ಜಿಲ್ಲಾಧಿಕಾರಿ ಕಚೇರಿ ಪ್ರಾಂಗಣಕ್ಕೂ ಮಳೆನೀರು ನುಗ್ಗಿದೆ. ಭಾರಿ ಮಳೆ ಹಿನ್ನೆಲೆ ಸಿರಿಸಿಲ್ಲಾ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅನುರಾಗ್ ಜಯಂತಿರವರು ರಜೆ ಘೋಷಿಸಿದ್ದಾರೆ. ಅಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಸ್ತಿ ಮತ್ತು ಬೆಳೆ ನಷ್ಟದ ವಿವರಗಳಿಗಾಗಿ ಜಿಲ್ಲಾಡಳಿತ ನೀಡಿರುವ 9398684240 ನಂಬರ್ ಅನ್ನು ಸಂಪರ್ಕಿಸಬಹುದು. ಅಧಿಕಾರಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದು, ಪಟ್ಟಣದಲ್ಲಿ ವಿಶೇಷ ಸ್ಪೆಷಲ್ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಲಾಗಿದೆ.
ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಕೆಸಿಆರ್, ಕೆಟಿಆರ್ : ಸಿಎಂ ಕೆಸಿಆರ್ ಮತ್ತು ಸಚಿವ ಕೆ ಟಿ ರಾಮರಾವ್ ಸಿರಿಸಿಲ್ಲಾದ ಪ್ರವಾಹ ಪರಿಸ್ಥಿತಿ ಬಗ್ಗೆ ಅವಲೋಕಿಸಿದ್ದಾರೆ. ಸಚಿವ ಕೆಟಿಆರ್ ಆದೇಶದ ಮೇರೆಗೆ ಎರಡು ಡಿಆರ್‌ಎಫ್ ತಂಡಗಳು ಸಿರಿಸಿಲ್ಲಾಗೆ ತೆರಳಿವೆ. ದೋಣಿಗಳು, ಪ್ರವಾಹ ಪರಿಹಾರ ಸಾಧನಗಳೊಂದಿಗೆ ತೆರಳಿದ್ದು, ಪ್ರವಾಹ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಲಾಗುವುದು.
ಕಾರಿಗೆ ಹಗ್ಗ ಕಟ್ಟಿದ ವಿಡಿಯೋ ವೈರಲ್ : ಸದ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೋರ್ವ ತನ್ನ ಕಾರನ್ನು ಹಗ್ಗದಿಂದ ಕಟ್ಟುತ್ತಿದ್ದಾನೆ. ಕಾರಣ ಕಳ್ಳಲು ಕದಿಯಬಾರದು ಅಂತಾ ಅಲ್ಲ, ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು ಅಂತಾ. ತೆಲಂಗಾಣದಲ್ಲಿ ಪ್ರವಾಹದ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಸಿರಿಸಿಲ್ಲಾದ ಬೀದಿಗಳು ನದಿಗಳಂತಾಗಿವೆ.
ಕುಸಿದ ಬ್ರಿಡ್ಜ್ಗಳು : ಬಸ್ ನಿಲ್ದಾಣದಿಂದ ದೇವಸ್ಥಾನದ ರಸ್ತೆಯವರೆಗೆ ವೇಮುಲವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ಎರಡು ಮೂರು ದಿನಗಳಿಂದ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಸೇತುವೆ ಕುಸಿದಿದೆ.
ಕೋಳಿ ಫಾರ್ಮ್ಗೆ ನುಗ್ಗಿದ ಮಳೆನೀರು : ನಿಜಾಮಾಬಾದ್ ಜಿಲ್ಲೆಯ ಚಿಂತಲೂರು ಗ್ರಾಮದಲ್ಲಿ ಭಾರಿ ಪ್ರವಾಹದಿಂದ ಕೋಳಿ ಫಾರ್ಮ್ವೊಂದು ಕೊಚ್ಚಿಹೋಗಿದ್ದು, ಸ್ಥಳೀಯರು ಕೋಳಿಗಳನ್ನು ಒಯ್ಯುತ್ತಿದ್ದಾರೆ.
ವಾರಂಗಲ್ನಲ್ಲಿ ಮಳೆ : ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ವಾರಂಗಲ್ ನಗರದ ಹಲವು ಕಾಲೋನಿಗಳು ಪ್ರವಾಹದ ನೀರಿನಿಂದ ಮುಳುಗಿವೆ. ಸ್ಥಳೀಯರು ತಮ್ಮ ಮನೆಗಳಲ್ಲಿ ಪ್ರವಾಹದ ನೀರಿನಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರವಾಹದಿಂದಾಗಿ ವಾರಂಗಲ್-ಖಮ್ಮಂ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೆರೆಗಳು ಮತ್ತು ಜಲಾಶಯಗಳು ತುಂಬಿ ಹರಿಯುತ್ತಿವೆ. ಹನುಮಕೊಂಡದಲ್ಲಿ ಕಾಲೋನಿಗಳು ಜಲಾವೃತಗೊಂಡಿವೆ. ಕಟಾಕ್ಷಪುರ ಕೆರೆ ತುಂಬಿ ಹರಿಯುತ್ತಿರುವುದರಿಂದ ಹನುಮಕೊಂಡ ಮತ್ತು ಮುಳುಗು ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಜಗ್ತಿಯಲ್ನಲ್ಲಿ ಭಾರಿ ಮಳೆ : ಜಗ್ತಿಯಲ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಕೆಲ ಕಾಲೊನಿಗಳಲ್ಲಿ ನೀರು ಮನೆಗಳಿಗೆ ತಲುಪಿದೆ. ಜಗತಿಯಲ್ -ಧರ್ಮಪುರಿ ಮಾರ್ಗದಲ್ಲಿ ನಿನ್ನೆ ರಾತ್ರಿಯಿಂದ ಅನಂತರಾಮ ವಾಗುವಾ ತುಂಬಿ ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಯ್ಕಲ್-ಮೈಥಾಪುರ ಸೇತುವೆಯ ಮೇಲೆ ಪ್ರವಾಹದಿಂದಾಗಿ ನೀರು ಹರಿಯುತ್ತಿದ್ದು, ರಾಯ್ಕಲ್-ಮೈಥಾಪುರ ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿತು. ಮೆಟ್ಪಲ್ಲಿಯಲ್ಲಿರುವ ಪೆದ್ದವಾಡು ತುಂಬಿ ಹರಿಯುತ್ತಿದೆ. ಕೋರುಟ್ಲದ ಹಲವು ಮನೆಗಳಿಗೆ ನೀರು ನುಗ್ಗಿದೆ. ಸಾರಂಗಪುರ ವಲಯದ ಪೆಂಬಾಟ್ಲಾ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯುಂಟಾಗಿದೆ.
ಸಿದ್ದಪೇಟ್ ಮಳೆ : ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್, ಕೊಹೆದಾ ಮತ್ತು ಅಕ್ಕಣ್ಣಪೇಟ ಮಂಡಲಗಳಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಎಡೆಬಿಡದೇ ಮಳೆಯಾಗಿದೆ. ಈ ಹಿನ್ನೆಲೆ ಹುಸ್ನಾಬಾದ್ ಪಟ್ಟಣದ ಹಲವು ಕಾಲೋನಿಗಳಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದೆ. ಅಂಬೇಡ್ಕರ್ ಚೌರಸ್ತಾ ಮತ್ತು ಮಲ್ಲೇಚೆಟ್ಟು ಚೌರಸ್ತಾ ಜಲಾವೃತಗೊಂಡಿದೆ. ಮುಖ್ಯ ರಸ್ತೆಯಲ್ಲಿರುವ ಶಾಪಿಂಗ್ ಮಾಲ್‌ಗಳಿಗೆ ಪ್ರವಾಹದ ನೀರು ನುಗ್ಗಿದೆ.
ಜಿಲ್ಲಾವಾರು ಮಳೆ ಮಾಹಿತಿ : ಕರೀಂನಗರ ಜಿಲ್ಲೆ, ಕಾಮರೆಡ್ಡಿ ಜಿಲ್ಲೆ, ನಿರ್ಮಲ್ ಜಿಲ್ಲೆ, ಮಂಚೇರಿಯಲ್ ಜಿಲ್ಲೆ ಮತ್ತು ಭದ್ರಾದ್ರಿ ಕೋತಗುಡೆಮ್ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಈ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹದಿಂದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ.