ಭೋಪಾಲ್(ಮಧ್ಯಪ್ರದೇಶ) : ವರ 'ಧೋತಿ ಕುರ್ತಾ' ಬದಲು 'ಶೇರ್ವಾನಿ' ಧರಿಸಿ ಮದುವೆ ಮನೆಗೆ ಬಂದಿದ್ದಕ್ಕೆ ಗಲಾಟೆ ಸೃಷ್ಟಿಯಾಗಿದೆ. ಧೋತಿ ಕುರ್ತಾ ಧರಿಸದ ಕಾರಣ ವರ ಮತ್ತು ವಧುವಿನ ಕುಟುಂಬದವರ ನಡುವೆ ವಾಗ್ವಾದ ನಡೆದಿದೆ. ಎರಡು ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ವಧುವಿನ ಕುಟುಂಬವು ವರನು ತಮ್ಮ ಬುಡಕಟ್ಟು ಸಂಪ್ರದಾಯದಂತೆ ಮದುವೆ ವೇಳೆ ಧೋತಿ-ಕುರ್ತಾ ಧರಿಸಬೇಕು. ಶೆರ್ವಾನಿ ಅಲ್ಲ ಎಂದು ಹೇಳಿದರು. ಆದರೆ, ಧಾರ್ ನಗರದ ನಿವಾಸಿಯಾದ ವರ ಸುಂದರ್‌ಲಾಲ್ ಅವರು ಶೆರ್ವಾನಿ ಧರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದವರು ವಾಗ್ವಾದ ಮಾಡಲು ಪ್ರಾರಂಭ ಮಾಡಿದ್ದಾರೆ.
ಇದು ಅತಿರೇಕಕ್ಕೆ ಹೋಗಿ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆ ಹಲವರಿಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ಧಮನೋಡ್ ಪೊಲೀಸ್ ಠಾಣೆ ಪ್ರಭಾರಿ ಸುಶೀಲ್ ಯದುವಂಶಿ ತಿಳಿಸಿದ್ದಾರೆ. ಘಟನೆಯ ನಂತರ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಮನೋದ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ವಧುವಿನ ಸಂಬಂಧಿಕರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ಕೆಲವು ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೇ ಎರಡೂ ಕಡೆಯವರು ಪೊಲೀಸರಿಗೆ ದೂರು ಸಲ್ಲಿಸಿದರು. ಆದಾಗ್ಯೂ, ವಧು ಮತ್ತು ವರನ ಕುಟುಂಬಗಳು ಧಾರ್ ನಗರಕ್ಕೆ ತಲುಪಿ ಮದುವೆಯ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.