ನವದೆಹಲಿ: ಪ್ಯಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯ ಉದ್ದಕ್ಕೂ ಭಾರತ-ಚೀನಾ ಸೇನಾ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿವೆ.
ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಒಪ್ಪಂದದಂತೆ, ಚೀನಾದ ಸೈನಿಕರು ಫಿಂಗರ್ 8 ರ ಪೂರ್ವಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಮತ್ತು ಭಾರತೀಯ ಸೈನಿಕರು ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 4 ಗೆ ಹತ್ತಿರವಿರುವ ಧನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿ ನಿಯೋಜನೆಗೊಳ್ಳಲಿದ್ದಾರೆ.
ಈ ಹಿಂದೆ ಪರಸ್ಪರ 50 ಮೀಟರ್ ಹತ್ತಿರದಲ್ಲಿದ್ದ ಎರಡೂ ದೇಶಗಳ ಶಸ್ತ್ರಾಸ್ತ್ರ ವಾಹನಗಳನ್ನು ಸೇನಾ ಪಡೆಗಳು ಹಿಂತೆಗೆದುಕೊಂಡಿವೆ.
ಚೀನಾ ಮತ್ತು ಭಾರತ ಸೇನೆಗಳ ನಡುವೆ ನಾಳೆ ಕಾರ್ಪ್ಸ್ ಕಮಾಂಡರ್ ಮಟ್ಟದ 10ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಪೂರ್ವ ಲಡಾಖ್‌ನ ಗೊಗ್ರಾ, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳು ಸೇರಿದಂತೆ ಮೂರು ಘರ್ಷಣೆ ಸ್ಥಳಗಳಿಂದ ಸೇನೆ ಹಿಂಪಡೆಯುವಿಕೆ ಬಗ್ಗೆ ಉಭಯ ಪಕ್ಷಗಳು ಚರ್ಚಿಸುತ್ತವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.