ಮುಂಬೈ : ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಭಾರತದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಒದಗಿಸಿರುವ ಶಂಕೆ ಹಿನ್ನೆಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರನ್ನು (ಡಿಆರ್‌ಡಿಒ) ಗುರುವಾರ ಪುಣೆಯಲ್ಲಿ ಬಂಧಿಸಿದೆ. ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ನಂತರ ಸಂಸ್ಥೆಯ ನಿರ್ದೇಶಕರಾದ ಪ್ರದೀಪ್ ಕುರುಲ್ಕರ್ ಅವರು ಪಾಕಿಸ್ತಾನಕ್ಕೆ ಮಾಹಿತಿ ನೀಡಿರುವ ಶಂಕೆ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ ಮುಂಬೈನಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಇದೀಗ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರದೀಪ್ ಕುರುಲ್ಕರ್ ಅವರು ಡಿಆರ್ಡಿನನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿವೃತ್ತಿ ಹೊಂದಲು ಇನ್ನು ಕೇವಲ ಆರು ತಿಂಗಳು ಮಾತ್ರ ಬಾಕಿ ಇತ್ತು. ಕಳೆದ ಆರು ತಿಂಗಳ ಹಿಂದೆ ಅಧಿಕಾರಿಯು ಪಾಕಿಸ್ತಾನ ಹೆಣೆದಿದ್ದ ಹನಿಟ್ರ್ಯಾಪ್ಗೆ ಸಿಲುಕಿದ್ದರು. ಕಳೆದ ಆರು ತಿಂಗಳಿನಿಂದ ಈ ಮಹಿಳೆಯೊಂದಿಗೆ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಈ ಮಹಿಳೆಯು ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ.
ಇನ್ನು, ಅಧಿಕಾರಿಯು ಮೇ 3ರಂದು ಪುಣೆಯಲ್ಲಿರುವ ಡಿಆರ್ ಡಿಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ವಾಟ್ಸಾಪ್ ಮೂಲಕ ಧ್ವನಿ ಸಂದೇಶಗಳು ಮತ್ತು ವಿಡಿಯೋ ಕರೆಗಳ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಪಿಐಒ)ಗೆ ಸಂದೇಶ ರವಾನಿಸಿದ್ದರು ಎಂದು ಹೇಳಲಾಗಿದೆ.
ಡಿಆರ್‌ಡಿಒ ವಿಜ್ಞಾನಿಯೊಬ್ಬರು ಕರ್ತವ್ಯದಲ್ಲಿರುವಾಗ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಶತ್ರು ರಾಷ್ಟ್ರಕ್ಕೆ ಭಾರತದ ಸೂಕ್ಷ್ಮ ರಹಸ್ಯ ಮಾಹಿತಿಯನ್ನು ಅನಧಿಕೃತವಾಗಿ ಒದಗಿಸಿದರೆ ಭಾರತ ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಅಪಾಯ ಇದೆ. ಈ ಸಂಬಂಧ ಭಯೋತ್ಪಾದನ ನಿಗ್ರಹ ದಳದ ಮಹಾರಾಷ್ಟ್ರ ಪೊಲೀಸರು ಸರ್ಕಾರಿ ರಹಸ್ಯಗಳ ಕಾಯ್ದೆಯ 1923ರ 03 (1)(ಸಿ). 05 (1) (ಎ), 05 (1) (ಸಿ), 05 (1) (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಟಿಎಸ್ ಅಧಿಕಾರಿ ಮಹೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಹಿಂದೆ 2018ರಲ್ಲಿಯೂ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ಹಿನ್ನೆಲೆ ಒಬ್ಬರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ : ಕಾರಿನ ಮೇಲೆ ಟ್ಯಾಂಕರ್ ಪಲ್ಟಿ.. ಮೂವರು ಮಕ್ಕಳು ಸೇರಿ 9 ಮಂದಿ ಸಾವು