ನವದೆಹಲಿ: ಕಾಂಗ್ರೆಸ್ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ಕುರಿತು ಪುನರ್ ಪರಿಶೀಲನೆ ನಡೆಸುವುದಾಗಿ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹೇಳಿರುವ ಕುರಿತು ಶನಿವಾರ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿವೆ. ಈ ಬಗ್ಗೆ ಕಾಂಗ್ರೆಸ್ ವಕ್ತಾರರು ಸ್ಪಷ್ಟನೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ಕಾಂಗ್ರೆಸ್ 2019ರ ಆಗಸ್ಟ್ 6 ರಂದು ಸ್ವೀಕರಿಸಿದ ಗೊತ್ತುವಳಿಯನ್ನು ಪುನರುಚ್ಚರಿಸಿದ್ದಾರೆ.
"2019ರ ಆಗಸ್ಟ್ 6 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ತನ್ನ ನಿಲುವನ್ನು ಗೊತ್ತುವಳಿಯ ಮುಖಾಂತರ ಸ್ಪಷ್ಟಪಡಿಸಿದೆ. ಪಕ್ಷದ ನಿಲುವು ಯಾವಾಗಲೂ ಇದೇ ಆಗಿದ್ದು, ಪಕ್ಷದ ಮುಖಂಡರೆಲ್ಲರೂ ಇದಕ್ಕೆ ಬದ್ಧರಾಗಿರಬೇಕು" ಎಂದು ವಕ್ತಾರ ಪವನ ಖೇರಾ ಶನಿವಾರ ತಿಳಿಸಿದ್ದಾರೆ.
ಮೇ 12 ರಂದು ನಡೆದಿದೆ ಎನ್ನಲಾದ ಆಡಿಯೋವೊಂದು ಕ್ಲಬ್ ಹೌಸ್ ಆ್ಯಪ್ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ದಿಗ್ವಿಜಯ ಸಿಂಗ್ ಪಾಕಿಸ್ತಾನದ ಪತ್ರಕರ್ತರೊಬ್ಬರೊಂದಿಗೆ ಸಂವಾದ ನಡೆಸಿರುವುದು ಕೇಳಿಸುತ್ತದೆ.
"ಆರ್ಟಿಕಲ್ 370 ರದ್ದುಗೊಳಿಸಿದ್ದು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಇಬ್ಭಾಗ ಮಾಡಿದ್ದು ಅತ್ಯಂತ ದುಃಖದ ಸಂಗತಿ. ನಾವು ಖಂಡಿತವಾಗಿಯೂ ಇದನ್ನು ಮರುಪರಿಶೀಲಿಸುತ್ತೇವೆ. ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ (ಇನ್ಸಾನಿಯತ್) ಎಲ್ಲವೂ ಸತ್ತುಹೋಗಿದ್ದು, ಅವರು ಎಲ್ಲರನ್ನೂ ಜೈಲಿಗೆ ಹಾಕಿದ್ದಾರೆ. ಕಶ್ಮೀರಿಯತ್ ಎಂಬುದು ಜಾತ್ಯತೀತತೆಯ ಮೂಲಾಧಾರವಾಗಿದೆ." ಎಂದು ದಿಗ್ವಿಜಯ ಸಿಂಗ್ ಹೇಳಿದ್ದು ಆಡಿಯೋದಲ್ಲಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಅಂಗೀಕರಿಸಲಾದ ಗೊತ್ತುವಳಿ ಏನು?
"ಸಂವಿಧಾನದ ಆಶಯಗಳನ್ನು ತಪ್ಪಾಗಿ ಅರ್ಥೈಸಿ ಏಕಪಕ್ಷೀಯವಾಗಿ, ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವಾಗಿ ಆರ್ಟಿಕಲ್ 370 ರದ್ದುಗೊಳಿಸಿದ್ದು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಡೆದಿದ್ದನ್ನು ಕಾಂಗ್ರೆಸ್ ಕಾರ್ಯಕಾರಿ ಸಭೆಯು ತಿರಸ್ಕರಿಸುತ್ತದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಜನತೆಯ ಬೆಂಬಲಕ್ಕೆ ನಿಲ್ಲಲಿದ್ದು, ಬಿಜೆಪಿಯ ಒಡೆದಾಳುವ ಹಾಗೂ ಕುಟಿಲ ತಂತ್ರವನ್ನು ವಿರೋಧಿಸುತ್ತದೆ. ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ವಿಲೀನವು ಅಂತಿಮ ಹಾಗೂ ಬದಲಾಯಿಸಲಾಗದ್ದು. ಜಮ್ಮು ಕಾಶ್ಮೀರದ ಎಲ್ಲ ವಿಷಯಗಳು ಭಾರತದ ಆಂತರಿಕ ವಿಚಾರಗಳಾಗಿದ್ದು, ಇದರಲ್ಲಿ ಹೊರಗಿನವರ ಯಾವುದೇ ಹಸ್ತಕ್ಷೇಪವನ್ನು ಸಹಿಸಲಾಗದು." ಎಂದು ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.